ಪಟ್ರಮೆ : ವಿದ್ಯಾರ್ಥಿಗಳು ಕೇವಲ ಅವರವರ ತರಗತಿಗೆ ಸೀಮಿತವಾಗಿರದೆ, ಭಿನ್ನ ವಿದ್ಯಾರ್ಥಿಗಳೊಂದಿಗೆ ಕಲಿಕಾ ವಿಚಾರಗಳನ್ನು ಹಂಚಿಕೊಂಡು ಕಲಿತಾಗ ಅದು ಹೆಚ್ಚು ನೆನಪಿನಲ್ಲಿ ಉಳಿದುಕೊಳ್ಳುತ್ತದೆ. ವಿದ್ಯಾರ್ಥಿಗಳು ನಿತ್ಯ ತರಗತಿಯೊಳಗಿನ ಪಾಠಗಳನ್ನು ಕಲಿಯುವಾಗ ಅಪರೂಪಕೊಮ್ಮೆಯಾದರೂ ಕಾರ್ಯಗಾರಗಳಂತಹ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಕಲಿಕೆಯಲ್ಲಿನ ಆಸಕ್ತಿ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದು ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಅಭಿಪ್ರಾಯಪಟ್ಟರು.
ಅವರು ಶಾಲೆಯ ಕನ್ನಡ ವಿಭಾಗದ ವತಿಯಿಂದ ಜ.19ರಂದು ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆದ ಕನ್ನಡ ವ್ಯಾಕರಣ ಮಾಲಿಕೆ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆದಾಗ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಿಕೊಳ್ಳುತ್ತಾರೆ ಶಿಕ್ಷಕರಿಗೂ ಇದು ಹೊಸ ಅನುಭವವನ್ನು ನೀಡುತ್ತದೆ ಎಂದರು.
ಶಾಲೆಯ ಕನ್ನಡ ವಿಭಾಗದ ಶಿಕ್ಷಕಿಯರಾದ ಸುಪ್ರೀತಾ ಎ ಹಾಗೂ ಸ್ವಾತಿ ಕೆ.ವಿ ಕಾರ್ಯಾಗಾರದ ಅವಧಿಯಲ್ಲಿ ಕನ್ನಡ ವ್ಯಾಕರಣದಲ್ಲಿ ತಿಳಿಸಲಾಗಿರುವ ಕನ್ನಡ ಸಂಧಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸುಮಾರು 2 ಗಂಟೆಗಳ ಕಾಲ ನಡೆದ ಕಾರ್ಯಾಗಾರದಲ್ಲಿ 5ನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಗಾರವು ಪ್ರಶ್ನೋತ್ತರ ಹಾಗೂ ಸಂವಾದ ರೀತಿಯಲ್ಲಿ ಮೂಡಿಬಂದಿತು.
ಶಾಲೆಯ ಇತರ ಶಿಕ್ಷಕರು ಕೂಡ ಕಾರ್ಯಗಾರದಲ್ಲಿ ಪಾಲ್ಗೊಂಡರು.