24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಯೋಧ್ಯೆ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಪ್ರಯುಕ್ತ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ

ನಾರಾವಿ: ಅಯೋಧ್ಯೆಯ ಭವ್ಯ ದಿವ್ಯ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ರಘುಕುಲ ತಿಲಕ ಪ್ರಭು ಶ್ರೀರಾಮಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆಯ ಅಂಗವಾಗಿ ನಾರಾವಿಯ ಸಮಸ್ತ ಹಿಂದೂ ಸಂಘಟಕರ ವತಿಯಿಂದ ಹಾಗೂ ರಾಮ ಭಕ್ತರ ಸಹಕಾರದಿಂದ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ ಕಾರ್ಯಕ್ರಮವು ಭಾರೀ ಜನಸ್ತೋಮದೊಂದಿಗೆ ಬಹಳ ವಿಜೃಂಭಣೆಯಿಂದ ಜ.22ರಂದು ನೆರವೇರಿತು.

ಬೆಳಿಗ್ಗೆ ಸಾಮೂಹಿಕ ವಿಷ್ಣು ಸಹಸ್ರನಾಮ,ರಾಮ ರಕ್ಷಾ ಸ್ತೋತ್ರ,ಹನುಮಾನ್ ಚಾಲೀಸ ಪಠಣದೊಂದಿಗೆ ಶ್ರೀ ರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ರಾಮ ಭಕ್ತರಿಂದ ವಿಶೇಷ ಭಜನಾ ಸಂಕೀರ್ತನೆ, ಕುಣಿತ ಭಜನೆ ನಡೆಯಿತು. ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶ್ರೀ ರಾಮ ತಾರಕ ಮಂತ್ರ ಜಪ ಯಜ್ಞ ಆಯೋಜಿಸಲಾಗಿತ್ತು. ಮಧ್ಯಾಹ್ನ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮ ದೇವರು ಪ್ರಾಣ ಪ್ರತಿಷ್ಠಾಪನೆಯೊಂದಿಗೆ ವಿರಾಜಮಾನರಾದ ಮೇಲೆ ರಾಮ ಭಕ್ತಾದಿಗಳು ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಾವಿರಾರು ಹಣತೆಗಳಲ್ಲಿ ದೀಪ ಬೆಳಗಿಸಿ ಪ್ರಭು ಶ್ರೀರಾಮ ದೇವರಿಗೆ ಗೌರವಾರ್ಪಣೆ ಸಲ್ಲಿಸಿದರು.

ನಂತರ ಶ್ರೀ ಸೂರ್ಯನಾರಾಯಣ ದೇವರ ವಿಶೇಷ ಹೂವಿನ ಪೂಜೆ ಮಹಾ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.

ವಿಶೇಷವಾಗಿ ಅಂದಿನ ಕಾರ್ಯಕ್ರಮದಲ್ಲಿ 1992ರ ಅಯೋಧ್ಯಾ ಕರಸೇವೆಯಲ್ಲಿ ಪಾಲ್ಗೊಂಡ ಕರಸೇವಕರಾದ ನಾರಾವಿಯ ಗಣೇಶ್ ಹೆಗ್ಡೆ ಅರಸಕಟ್ಟೆ ಮತ್ತು ಕುತ್ಲೂರಿನ ರವೀಶ್ ಇವರುಗಳನ್ನು ನಾರಾವಿಯ ಸಮಸ್ತ ಹಿಂದೂ ಸಂಘಟಕರ ಪರವಾಗಿ ರಾಮ ಭಕ್ತರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗಣೇಶ್ ಹೆಗ್ಡೆಯವರು ಗೌರವಾರ್ಪಣೆಯನ್ನು ಸ್ವೀಕರಿಸಿ ಅಂದಿನ ಕರಸೇವೆಯ ಕರಾಳ ಅನುಭವದ ಕಥಾನಕವನ್ನು ಸಭೆಗೆ ಸಂಕ್ಷಿಪ್ತವಾಗಿ ವಿವರಿಸಿದರು. ರತ್ನಾಕರ್ ಭಟ್ ಹೊಳೆಹೊದ್ದು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಸಾವಿರಾರು ರಾಮ ಭಕ್ತರು ಉಪಸ್ಥಿತರಿದ್ದರು.

ಬೆಳಗಿನಿಂದ ಸಂಜೆಯ ತನಕ ದೇವಸ್ಥಾನದ ಆವರಣದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಟಿವಿ ಪರದೆಯ ಮೂಲಕ ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀರಾಮ ದೇವರ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

Related posts

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರಿ ಭಾರತಿ ಬಿಜೆಪಿ – 7 ಸ್ಥಾನ, ಕಾಂಗ್ರೆಸ್ – 5 ಸ್ಥಾನ

Suddi Udaya

ಕೊಯ್ಯೂರು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯ

Suddi Udaya

ಕುತ್ಲೂರು: ಪುನರ್ವಸತಿ ಹೊಂದಿರುವ ಫಲಾನುಭವಿಗಳಿಗೆ ಉಚಿತ ಕೃಷಿ ಉಪಕರಣಗಳ ವಿತರಣೆ

Suddi Udaya

ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಧರಣೇಂದ್ರ ಕೆ. ಜೈನ್ ಆಯ್ಕೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಉಚಿತ ದಂತ ತಪಾಸಣಾ ಶಿಬಿರ

Suddi Udaya
error: Content is protected !!