ಬೆಳ್ತಂಗಡಿ: ದೇಶದಲ್ಲಿ ನ್ಯಾಯ ಸಮ್ಮತ ಶಾಂತಿಯುತ ಮತದಾನದ ಅಗತ್ಯವಿದ್ದು ಜಾತಿ-ಧರ್ಮ ಮೀರಿ ಎಲ್ಲರೂ ಮತದಾನ ಮಾಡಬೇಕು. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಅಂಕ ಗಳಿಸುವ ಚಿಂತನೆಯ ಜೊತೆಗೆ ಸಮಾಜದ ಉತ್ತಮ ಪ್ರಜೆಗಳಾಗಲು ಗುರಿಹೊಂದಬೇಕು. ದೇಶದ ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾರ್ಥಿಗಳ ಕೊಡುಗೆ ಅಮೂಲ್ಯವಾಗಿದ್ದು ಈ ನಿಟ್ಟಿನಲ್ಲಿ ದೇಶದ ಅಭಿವೃದ್ಧಿ ಚಿಂತನೆಯಲ್ಲಿ ಅರ್ಹತೆ ಹೊಂದಿದ ವಿದ್ಯಾರ್ಥಿಗಳೆಲ್ಲರೂ ಕಡ್ಡಾಯ ಮತದಾನ ಮಾಡುವ ಸಂಕಲ್ಪ ಹೊಂದಬೇಕು ಎಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಹೇಳಿದರು.
ಅವರು ಗುರುವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಬೆಳ್ತಂಗಡಿ ಇದರ ವತಿಯಿಂದ ವಿವಿಧ ಇಲಾಖಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಮತದಾನ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ ಆಡಳಿತಾತ್ಮಕವಾಗಿ ಸಂವಿಧಾನ ರಚನೆಯಾಗದೆ ಶಾಸಕಾಂಗವಾಗಿ ಆಡಳಿತ ನಡೆಸಲು ಸಾಧ್ಯವಿರಲಿಲ್ಲ. 1950ರಲ್ಲಿ ಸಂವಿಧಾನ ಸಮಿತಿಯ 14 ಮಂದಿ ಸದಸ್ಯರು ಆಡಳಿತ ಚುಕ್ಕಾಣಿ ಹಿಡಿದರು. 1950 ಜನವರಿ 25ರಂದು ಚುನಾವಣಾ ಆಯೋಗ ರಚನೆಯಾಯಿತು. ಅಲ್ಲಿಂದ ಸಾಮಾಜಿಕ ಜಾತ್ಯಾತೀತ ಪ್ರಜಾಸತಾತ್ಮಕ ಗಣರಾಜ್ಯ ಪ್ರಾರಂಭವಾಗಿ ಅಲ್ಲಿಂದ ಪ್ರಜೆಗಳಿಂದ ಪ್ರಜೆಗಳಿಗೆ ಪ್ರಜೆಗಳಿಗೋಸ್ಕರ ಆಡಳಿತ ಜಾರಿ ಬಂದಿದೆ. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಜಾರಿಯಾಗಿ ಉತ್ತಮ ಆಡಳಿತ ನೀಡುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಗಳಿಗಿದೆ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಅಜಂತಾ, ತಾಲೂಕು ಪಂಚಾಯತ್ ನ ವ್ಯವಸ್ಥಾಪಕ ಪ್ರಶಾಂತ್ ಡಿ, ಲೆಕ್ಕ ಪತ್ರ ವಿಭಾಗದ ಗಣೇಶ್, ಸಮಾಜ ಕಲ್ಯಾಣ ಇಲಾಖಾ ನಿರ್ದೇಶಕ ಜೋಸೆಫ್, ಪಶು ಸಂಗೋಪನಾ ಇಲಾಖಾ ನಿರ್ದೇಶಕ ಡಾ.ಮಂಜ ನಾಯ್ಕ ಉಪಸ್ಥಿತರಿದ್ದರು. ನಗರ ಪಂಚಾಯತ್ ಮುಖ್ಯ ಅಧಿಕಾರಿ ರಾಜೇಶ್ ಸ್ವಾಗತಿಸಿ ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ್ ಲಾಯಿಲ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮತದಾನ ಜಾಗೃತಿ ಬಗ್ಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
.