
ಬೆಳ್ತಂಗಡಿ: ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾಶ್ರಮದ ಬಳಿ ಇರುವ ಇಳಿಜಾರಾದ ಗುಡ್ಡ ಪ್ರದೇಶದಲ್ಲಿ ಮಾನವ ದೇಹದ ತಲೆಬುರುಡೆ ಹಾಗೂ ಮೂಳೆಗಳು ಪತ್ತೆ ಯಾಗಿದ್ದು, ಇದು ಆಶ್ರಮದಿಂದ ಕಾಣೆಯಾಗಿದ್ದ ವ್ವಕ್ತಿಯದೆಂದು ಸಂಶಯಿಸಲಾಗಿದೆ.
ಶ್ರೀ ಗುರು ಚೈತನ್ಯ ಸೇವಾಶ್ರಮ , ಗುಂಡೂರಿ ಇದರ ಮೇಲ್ವಿಚಾರಕ ಹೊನ್ನಯ್ಯ ಕಾಟಿಪಳ್ಳ ಅವರು ವೇಣೂರು ಪೊಲೀಸರಿಗೆ ದೂರು ನೀಡಿ, ಜ.30 ರಂದು ಬೆಳಿಗ್ಗೆ ಸುಮಾರು 6.30 ಗಂಟೆಗೆ ತಾನು ನಡೆಸುತ್ತಿರುವ ಬೆಳ್ತಂಗಡಿ ತಾಲೂಕು ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾಶ್ರಮದ ಬಳಿ ಇರುವ ಇಳಿಜಾರಾದ ಗುಡ್ಡ ಪ್ರದೇಶದಲ್ಲಿ ಯಾವುದೋ ಮಾನವ ದೇಹದ ತಲೆಬುರುಡೆ ಹಾಗೂ ಮೂಳೆಗಳು ಇರುವುದಾಗಿ ಆಶ್ರಮದ ನೆರೆ ಮನೆಯ ರಮೇಶ್ ಎಂಬವರು ತಿಳಿಸಿದ ಮಾಹಿತಿಯಂತೆ ರಮೇಶ ರವರೊಂದಿಗೆ ಸದ್ರಿ ಗುಡ್ಡ ಜಾಗಕ್ಕೆ ತೆರಳಿ ನೋಡಲಾಗಿ ಅಲ್ಲಲ್ಲಿ ಮಾನವನ ದೇಹದ ಭಾಗಗಳಂತೆ ಕಾಣುವ ತಲೆ ಬುರುಡೆ ಹಾಗೂ ಮೂಳೆಗಳು ಕಂಡುಬಂದಿದೆ. ಅದರ ಪಕ್ಕದಲ್ಲಿ ಒಂದು ಕಂದು ಬಣ್ಣದ ಬರ್ಮುಡ ಚಡ್ಡಿ ಹಾಗೂ ಟೀ-ಶರ್ಟ್ ತುಂಡುಗಳು ಬಿದ್ದಿರುವುದು ಪತ್ತೆಯಾಗಿದೆ. ಸದ್ರಿ ಬಟ್ಟೆ ತುಂಡುಗಳು ತನ್ನ ಆಶ್ರಮದಿಂದ ಕಾಣೆಯಾಗಿರುವ ಸುಧಾಕರ ಎಂಬರು ಕಾಣೆಯಾದ ಸಮಯ ಧರಿಸಿದ್ದ ಬಟ್ಟೆಯಂತೆ ಕಂಡುಬರುತ್ತಿದ್ದು, ಸದ್ರಿ ಮಾನವ ದೇಹದ ಅವಶೇಷಗಳು ಸುಧಾಕರನದ್ದೇ ಆಗಿರುವ ಬಗ್ಗೆ ಸಂಶಯವಿರುತ್ತದೆ. ಆದ್ದರಿಂದ ಸುಧಾಕರನು ರಾತ್ರಿ ಸಮಯ ಆಶ್ರಮ ಬಿಟ್ಟು ಹೋಗುವಾಗ ಆತನಿಗಿದ್ದ ಮಾನಸಿಕ ಅಸೌಖ್ಯದಿಂದ ಬಿದ್ದು ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಾಗಿ ಒತ್ತಾಯಿಸಿದ್ದಾರೆ. ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.