ಉಜಿರೆ : ಮನುಷ್ಯ ತನಗಾಗಿ ಬದುಕುವುದು ಸ್ವಾಭಾವಿಕ, ಆದರೆ ಸಮಾಜಕ್ಕಾಗಿ ಬದುಕುವುದು ಅತ್ಯಂತ ಶ್ರೇಷ್ಠವಾಗಿದೆ.ಈ ರೀತಿ ಬದುಕುವಂತೆ ತರಭೇತಿಯನ್ನು ರೋವರ್ಸ್ ಮತ್ತು ರೇಂಜರ್ಸ್ ನಂತಹ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಭಾರತ್ ಸ್ಕೌಟ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ಆಯುಕ್ತ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ ಸೋಮಶೇಖರ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್‌ದಳದಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕೇವಲ ಸರ್ಟಿಫಿಕೇಟ್ ಪಡೆಯುವುದೇ ಶಿಕ್ಷಣವಲ್ಲ. ಸಂದರ್ಭಕ್ಕೆ ತಕ್ಕಂತೆ ನಿರ್ಧರಿಸುವುದು ನಿರ್ಧರಿಸಿರುವುದನ್ನು ತತ್ ಕ್ಷಣದಲ್ಲಿ ಕಾರ್ಯಗತಗೊಳಿಸುವುದು ಅಪಾಯಕಾರಿ ಸನ್ನಿವೇಶವನ್ನೂ ಸಹ ದಿಟ್ಟವಾಗಿ ಎದುರಿಸುವ ಕೌಶಲ್ಯ, ನಾಯಕತ್ವಗುಣ , ಮುಂದಾಳತ್ವ ವಹಿಸುವಿಕೆ ಹೀಗೆ ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವಂತ ಶಿಕ್ಷಣ ಜೊತೆಗೆ ತರಭೇತಿ ಪಡೆಯುವುದು ಸಹ ಮುಖ್ಯ. ಈ ನಿಟ್ಟಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ ಮಾತನಾಡಿ ರೋವರ್ಸ್ ರೆಂಜರ್ಸ್ ಬದುಕು ಸ್ವಲ್ಪ ಕಷ್ಟ ಎನಿಸಿದರೂ ಅದರ ಪ್ರತಿಫಲ ಮಾತ್ರ ತುಂಬಾ ಸಿಹಿಯಾಗಿರುತ್ತದೆ.ಕಲಿತ ತರಭೇತಿಯನ್ನು ಜೀವನದಲ್ಲಿ ಎಂದಿಗೂ ಪಾಲಿಸುವಂತೆ ಕರೆ ನೀಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕಡೆ ಸೇವೆ ಹಾಗೂ ವಿವಿಧ ಶಿಬಿರಗಳಲ್ಲಿ ಭಾಗವಹಿಸಿದ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು.
ಹಿರಿಯ ರೋವರ್ ಹಿತೇಶ್ ಬಿ.ಪಿ ಹಾಗೂ ರೇಂಜರ್ ಗಳಾದ ಮಲ್ಲಿಕಾ ಮತ್ತು ಸಿಂಧೂರಾ ತಮ್ಮ ಎರಡು ವರ್ಷಗಳ ರೋವೆರಿಂಗ್ ಮತ್ತು ರೇಂಜರಿಂಗ್ ಅನುಭವವನ್ನು ಹಂಚಿಕೊಂಡರು.
ವೇದಿಕೆಯ ಮೇಲೆ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಲಕ್ಷ್ಮೀಶ್ ಭಟ್ ಮತ್ತು ರೇಂಜರ್ ಲೀಡರ್ ಅಂಕಿತಾ ಎಮ್ ಕೆ ಉಪಸ್ಥಿತರಿದ್ದರು.
ರೇಂಜರ್ ವಿದ್ಯಾರ್ಥಿನಿ ಪ್ರಿಯದರ್ಶಿನಿ ಸ್ವಾಗತಿಸಿ, ರೋವರ್ ಹರ್ಷತ್ ವಂದಿಸಿದರು. ರೇಂಜರ್ ಆಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.