ಪತ್ರಿಕಾಗೋಷ್ಠಿ
ಕಳಿಯ: ಇಲ್ಲಿಯ ಕಳಿಯ ಮೂಡೈಪಲ್ಕೆ ಉದ್ಭವ ಶ್ರೀ ಆದಿಲಿಂಗೇಶ್ವರ ದೈವಸ್ಥಾನದಲ್ಲಿ ಡಿ.೩೦ರಂದು ರಾತ್ರಿ ನಡೆದ ದೈವೋತ್ಸವದ ಸಂದರ್ಭದಲ್ಲಿ ಅಕ್ರಮ ಪ್ರವೇಶ ಮಾಡಿ ದೈವ ನಿಂದನೆ ಮಾಡಿರುವ ಆರೋಪಿಗಳ ವಿರುದ್ಧ ದೂರು ನೀಡಿದರೂ, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕೈಗೊಳ್ಳದಿರುವುದು ನಮಗೆ ತೀವ್ರ ನೋವಾಗಿದೆ. ದೈವನರ್ತನದ ವೇಳೆ ತಮ್ಮ ಮೊಬೈಲ್‌ನಲ್ಲಿ ಚಿತ್ರಿಸಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟವರ ಮೇಲೆ ಸೈಬರ್ ಕ್ರೈಂ ಕಾನೂನಿನಲ್ಲಿ ಕೂಡಲೇ ಕೇಸು ದಾಖಲಿಸಿ, ವೀಡಿಯೋವನ್ನು ಅವರಿಂದಲೇ ಡಿಲೀಟ್ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಉದ್ಭವ ಶ್ರೀ ಆದಿಲಿಂಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ರುಕ್ಷ್ಮಯ್ಯ ಎಂ. ಆಗ್ರಹಿಸಿದರು.
ಅವರು ಫೆ. 6 ರಂದು ದೇವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನನ್ನ ಮಗ ಚಿತ್ತರಂಜನ್. ತನ್ನ 14 ವರ್ಷ ಪ್ರಾಯದಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ದೈವಾ ಅಭಯವಾಗಿ ನುಡಿದಂತೆ ನಮ್ಮ ದನದಹಟ್ಟಿಯ ಎದುರುಗಡೆ 2017 ಡಿಸೆಂಬರ್ 28 ರಂದು ಬೆಳಗ್ಗಿನ ಜಾವ ಶಿವಲಿಂಗ ಉದ್ಭವಿಸಿದ ಪುಣ್ಯಕ್ಷೇತ್ರವಾದೆ. ಅಂದಿನಿಂದ ಇಲ್ಲಿಯವರೆಗೆ ದೈವಾದೇಶದಂತೆ ಆರಾಧನೆಗಳು ನಡೆಯುತ್ತಾ ಬರುತ್ತಿದೆ ಎಂದು ವಿವರಿಸಿದರು.
ಈ ವರ್ಷ2023 ಡಿಸೆಂಬರ್ 28, 29 ಮತ್ತು 30 ರಂದು 6ನೇ ವಾರ್ಷಿಕೋತ್ಸವದ ಸಂದರ್ಭ ಡಿ.30 ರಂದು ರಾತ್ರಿ ನೆತ್ತರು ಗುಳಿಗ ದೈವಕ್ಕೆ ನೇಮ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು ಐದು ಮಂದಿ ಅಕ್ರಮವಾಗಿ ಪ್ರವೇಶ ಮಾಡಿ, ಏಕಾಏಕಿ ದೈವವನ್ನು ನಿಂದನೆ ಮಾಡಿ, ದೈವ ನರ್ತನ ಮಾಡುತ್ತಿದ್ದ ನನ್ನ ಮಗ ಚಿತ್ತರಂಜನ್‌ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ. ನಿಮ್ಮ ಜಾತಿಯವರಿಗೆ ದೈವ ಕಟ್ಟಲು ಯಾರು ಅನುಮತಿ ಕೊಟ್ಟಿದ್ದು, ನಿಮ್ಮ ಜಾತಿಯವರಿಗೆ ದೈವಕೋಲ ಕಟ್ಟಲು ಅವಕಾಶವಿಲ್ಲ, ನೀವು ದುಡ್ಡು ಮಾಡುವ ಉದ್ದೇಶದಿಂದ ದೈವಾರಾಧನೆ ಮಾಡುತ್ತಿದ್ದೀರಿ ಎಂಬ ಸುಳ್ಳು ಆರೋಪವನ್ನುಮಾಡಿದ್ದಾರೆ ಎಂದು ವಿವರಿಸಿದರು.
ನಮ್ಮ ದೈವದ ಅಪ್ಪಣೆಯಂತೆ ದೇವರ, ಶ್ರೀ ಕ್ಷೇತ್ರದಲ್ಲಿರುವ ಈಶ್ವರ ಗುಳಿಗ ಹಾಗೂ ನೆತ್ತೆರ್ ಗುಳಿಗ ದೈವಗಳಿಗೆ ಮಾತ್ರ ಕೋಲ ಸತತ ೬ ವರ್ಷಗಳಿಂದ ಚಿತ್ತರಂಜನ್ ಕಟ್ಟುತ್ತಾ ಬರುವುದಾಗಿದೆ.ಹೊರತು ಊರಿನ ಹೊರಗಡೆ ಹೋಗಿ ಎಲ್ಲಿಯೂ ಕೋಲ ಕಟ್ಟುವುದಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದ ಕೆಲವರು ನಮ್ಮ ಧಾರ್ಮಿಕ ಭಾವನೆಗೆ ತೇಜೋವಧೆ ಮಾಡುವ ಉದ್ದೇಶದಿಂದಲೇ ದೈವ ನರ್ತನ ನಡೆಯುತ್ತಿದ್ದಾಗಲೇ ಈ ರೀತಿ ಮಾಡಿದ್ದಾರೆ. ಈ ಘಟನೆ ಬಳಿಕ ನಾವು ದೈವಕ್ಕೆ ಯಾವುದೇ ಸೇವೆ ನೀಡಲ್ಲ, ದೈವವೇ ಸರಿಯಾದ ತೀರ್ಮಾನ ಕೊಡಬೇಕು ಎಂದು ಇದ್ದೇವೆ. ಘಟನೆ ಬಗ್ಗೆ ದೂರು ನೀಡಿದರೂ, ಪೊಲೀಸರು ಕ್ರಮಕೈಗೊಂಡಿಲ್ಲ ಎಂಬ ನೋವಿದೆ. ದೈವ ನರ್ತನ ಸೇವೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದು ಬಿಟ್ಟಿರುತ್ತಾರೆ. ಅವರ ಮೇಲೆ ಸೈಬರ್‌ಆಕ್ಟ್ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಧರ್ಮದರ್ಶಿ ಚಿತ್ತರಂಜನ್ ಮಾತನಾಡಿ, ದೈವದ ನೀಡಿದ ಪ್ರೇರಣೆಯಂತೆ ಇಲ್ಲಿ ಆರಾಧನೆಗಳು ನಡೆಯುತ್ತಿದೆ. ದೈವದ ನರ್ತನ ಸೇವೆ ಮಾಡಬೇಕು ಎಂದು ದೈವ ಅಭಯವಾಗಿರುವುದರಿಂದ ನಾನು ನರ್ತನ ಸೇವೆ ಮಾಡಿದ್ದೇನೆ. ನಾನು ಇದನ್ನು ವೃತ್ತಿಯಾಗಿ ಮಾಡಿಲ್ಲ, ನಮ್ಮ ಕ್ಷೇತ್ರದಲ್ಲಿ ಮಾತ್ರ ಕಳೆದ ಆರು ವರ್ಷಗಳಿಂದ ಮಾಡುತ್ತಿದ್ದೇನೆ. ಆದರೆ ಕಳೆದ ಬಾರಿ ಮಾಡಿದಾಗ ಕೆಲವರು ಬಂದು ಈ ರೀತಿ ಆಕ್ಷೇಪ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನನ್ನು ಕರೆದುಕೊಂಡು ಹೋಗಿ ತಪ್ಪು ಕಾಣಿಕೆ ಹಾಕಲು ಹೇಳಿದರು. ದೈವಕ್ಕೆ ನನ್ನಿಂದ ಅಪಮಾನವಾದರೆ ತಪ್ಪು ಕೇಳುತ್ತೇನೆ ಎಂದು ಹೇಳಿದ್ದೇನೆ. ಇದನ್ನು ಕೂಡಾ ಚಿತ್ರಿಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ವೆಂಕಣ್ಣ ಕೊಯ್ಯೂರು ಅವರು ಮಾತನಾಡಿ, ಇವರು ಆರಾಧಿಸುವ ಕ್ಷೇತ್ರದಲ್ಲಿ ನರ್ತನ ಸೇವೆ ಮಾಡಿದ್ದಾರೆಯೇ ಹೊರತು ಅದನ್ನು ವೃತ್ತಿಯಾಗಿ ಬೇರೆ ಕಡೆ ಎಲ್ಲಿಯೂ ಮಾಡಿಲ್ಲ, ಯಕ್ಷಗಾನ, ಪುರುಷರು ಕಟ್ಟುವಾಗ ಬೇರೆ ಜಾತಿಯವರು ದೈವದ ವೇಷ ಹಾಕುತ್ತಾರೆ ಅದಕ್ಕೆ ಯಾರಿಂದಾದರೂ ಆಕ್ಷೇಪ ಬಂದಿದೆಯೇ, ಕೇರಳದಲ್ಲಿ ಇವರ ಜಾತಿಯವರೇ ದೈವಕ್ಕೆ ಕಟ್ಟುತ್ತಾರೆ, ಅವರು ನರ್ತನ ಸೇವೆ ಸಂದರ್ಭ ಬಂದು ಆಕ್ಷೇಪ ಮಾಡಿರುವುದು ಸರಿಯಲ್ಲ ಎಂದು ಈಗಾಗಲೇ ಅವರಿಗೆ ಹೇಳಿದ್ದೇನೆ. ನರ್ತನ ಸೇವೆ ಸರಿಯಾಗದಿದ್ದರೆ ಒಳ್ಳೆಯ ರೀತಿಯಲ್ಲಿ ನಡೆಸಲು ಸಹಕಾರ ಮತ್ತು ಮಾರ್ಗದರ್ಶನ ನೀಡಲಿ ಎಂದು ತಿಳಿಸಿದರು. ಕಾನೂನು ಸಲಹೆಗಾರ ವಕೀಲ ಉದಯ ಬಿ.ಕೆ ಅವರು ಮಾತನಾಡಿ, ಸಂವಿಧಾನ ಮತ್ತು ಕಾನೂನಿನಲ್ಲಿ ಎಲ್ಲರಿಗೂ ದೇವರು, ದೈವರಾಧನೆಗೆ ಅವಕಾಶ ಇದೆ. ಇದನ್ನು ಮತ್ತೊಬ್ಬರು ತಡೆಯಲು ಆಗುವುದಿಲ್ಲ, ಇಲ್ಲಿ ಟ್ರಸ್ಟ್ ಮೂಲಕವೇ ಎಲ್ಲಾ ಕಾರ್ಯಕ್ರಮಗಳು ಕಾನೂನಿನಡಿಯಲ್ಲೇ ನಡೆಯುತ್ತಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ದೈವಸ್ಥಾನದ ಟ್ರಸ್ಟಿ ರುಕ್ಷ್ಮಯ್ಯರ ಪತ್ನಿ ರೇಖಾ ಉಪಸ್ಥಿತರಿದ್ದರು. ಕಾನೂನು ಸಲಹೆಗಾರ ಉದಯ ಬಿ.ಕೆ. ಸ್ವಾಗತಿಸಿ, ವಂದಿಸಿದರು.