ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್, ಅಭಿವೃದ್ಧಿ ವಿರೋಧಿ ಬಜೆಟ್ ಎಂದು ಬಿಜೆಪಿ ಸದಸ್ಯರು ವಿಧಾನಸೌಧ ದ್ವಾರದ ಎದುರು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ಬಜೆಟ್ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಶಾಸಕರು ಬಳಿಕ ವಿಧಾನಸಭೆ ಪ್ರವೇಶದ್ವಾರದ ಬಳಿ ಆಗಮಿಸಿ ಪ್ರತಿಭಟನೆ ನಡೆಸಿ ಬಜೆಟ್ ‘ಅಭಿವೃದ್ಧಿ’ ವಿರೋಧಿಯಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಿಡಿದ “ದಕ್ಷಿಣ ಕನ್ನಡ ತೆರಿಗೆ ಮುಸ್ಲಿಮರ ಮನೆಗೆ” ಭಿತ್ತಿಪತ್ರ ಗಮನ ಸೆಳೆದಿದೆ.
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕೋಟಿ ರೂಪಾಯಿ ಅನುದಾನಗಳ ಜೊತೆಗೆ ವಸತಿ ಶಾಲೆ, ಕಡಿಮೆ ಬಡ್ಡಿ ಸಾಲ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಜೊತೆಗೆ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಅವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ಈ ಬಗ್ಗೆ ಶಾಸಕ ಹರೀಶ್ ಪೂಂಜ ವಿರೋಧ ವ್ಯಕ್ತಪಡಿಸಿದ್ದು, ವಿಧಾನಸಭೆ ಪ್ರವೇಶದ್ವಾರದ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ “ದಕ್ಷಿಣ ಕನ್ನಡ ತೆರಿಗೆ ಮುಸ್ಲಿಮರ ಮನೆಗೆ” ಭಿತ್ತಿಪತ್ರ ಗಮನ ಸೆಳೆದಿದೆ.