ಬೆಳ್ತಂಗಡಿ : ಸಾಧಕರನ್ನು ಗೌರವಿಸಿದರೆ ಇತರರಿಗೆ ಸಾಧಿಸಲು ಪ್ರೋತ್ಸಾಹ ಸಿಕ್ಕಿದಂತೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನವು ಅನೇಕ ವರ್ಷಗಳಿಂದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದು ಇದೊಂದು ಶ್ರೇಷ್ಠ ಕಾರ್ಯ. ಸಮಾಜದಲ್ಲಿ ಇನ್ನು ಅನೇಕ ಸಾಧಕರು ತೆರೆಮರೆಯಲ್ಲಿದ್ದು ಮುಂದಿನ ದಿನಗಳಲ್ಲಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನವು ಅವರನ್ನು ಗುರುತಿಸುವ ಕಾರ್ಯವನ್ನು ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಸಾಂಸ್ಕೃತಿಕ ಸಂಘಟಕ ಭುಜಬಲಿ ಧರ್ಮಸ್ಥಳ ಹೇಳಿದರು.
ಅವರು ಫೆ.20 ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿ ಕುತ್ಯಾರು ಶ್ರೀ ಸೋಮನಾಥೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಡೆದ ಸುವರ್ಣ ರಂಗ ಸಮ್ಮಾನ್ , ಸಾಧನಾ ಭೂಷಣ – 2024 ಕಾರ್ಯಕ್ರಮದಲ್ಲಿ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಸುವರ್ಣ ಸಾಧನಾ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಪ್ರಶಸ್ತಿಗಳು ಜವಬ್ದಾರಿಯನ್ನು ಹೆಚ್ಚಿಸುತ್ತವೆ. ಬದುಕು ಕಟ್ಟೋಣ ತಂಡವು ಸಮಾನ ಮನಸ್ಕ ಯುವಕರ ತಂಡವನ್ನು ಹೊಂದಿ ಅನೇಕ ಸಮಾಜ ಮುಖಿ ಕಾರ್ಯವನ್ನು ಮಾಡುತ್ತಿದ್ದು, ಇತೀಚೆಗೆ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ಗೌರವವು ಶ್ರೇಷ್ಠ ಗೌರವವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಖ್ಯಾತ ಭಾಗವತರಾದ ಕಾವ್ಯಶ್ರೀ ಅಜೇರು, ದೈವ ನರ್ತಕ ಡಾ. ರವೀಶ್ ಪಡುಮಲೆ ಇವರಿಗೆ ಸುವರ್ಣ ರಂಗ ಸಮ್ಮಾನ್ ಮತ್ತು ಸಾಮಾಜಿಕ ಸೇವೆಗಾಗಿ ಗುರುದತ್ತ್ ಪ್ರಭು ಬೆಂಗಳೂರು ಇವರಿಗೆ ಸುವರ್ಣ ಸಾಧನಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಿಕ ಯಕ್ಷ-ಗಾನ-ವೈಭವ ಮತ್ತು ಮಂಜೇಶ್ವರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ಕಲ್ಜಿಗದ ಮಾಯ್ಕರೆ ‘ಪಂಜುರ್ಲಿ’ ನಾಟಕ ನಡೆಯಿತು. ಕಾರ್ಯಕ್ರಮದಲ್ಲಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಸುವರ್ಣ ಆರ್ಕೆಡ್ ಮಾಲೀಕ ನ್ಯಾಣಪ್ಪ ಪೂಜಾರಿ, ಧ.ಗ್ರಾ. ಯೋಜನೆಯ ನಿರ್ದೇಶಕ ಜಯಶಂಕರ್ ಶರ್ಮ, ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ, ಬೆಳ್ತಂಗಡಿ ಜೆ.ಸಿ.ಐ.ನ ಅಧ್ಯಕ್ಷ ರಂಜಿತ್ ಹೆಚ್.ಡಿ., ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಆಡಳಿತ ಮೋಕ್ತೆಸರ ಡಾ. ಹರ್ಷ ಸಂಪಿಗೆತ್ತಾಯ, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಪಿತಾಂಬರ ಹೆರಾಜೆ, ಡಾ. ಸುದೀರ್ ಪ್ರಭು, ವಾಣಿ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ಮಾಜಿ ತಾ.ಪಂ. ಶಶಿಧರ್ ಕಲ್ಮಂಜ, ಉದ್ಯಮಿ ಕಿರಣ್ ಶೆಟ್ಟಿ, ಪತ್ರಕರ್ತರುಗಳಾದ ದೇವಿಪ್ರಸಾದ್, ಲಕ್ಷೀ ಮಚ್ಚಿನ, ಮನೋಹರ್ ಬಳಂಜ, ಸಂತೋಷ್ ಕೋಟ್ಯಾನ್, ಮಂಜುನಾಥ ರೈ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.