ವೇಣೂರು : ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು ಇಲ್ಲಿನ 2000- 2001 ನೇ ಸಾಲಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳ ಅಪೂರ್ವ ಸಮಾಗಮ “ಸ್ನೇಹ ಸಮ್ಮಿಲನ” ವೇಣೂರು ಬಾಹುಬಲಿ ಮಹಾಸ್ವಾಮಿಯ ಮಹಾಮಸ್ತಕಾಭಿಷೇಕದ ಸುಸಂದರ್ಭದಲ್ಲಿ ಫೆ.25 ರಂದು ವೇಣೂರು ಕಾಲೇಜಿನಲ್ಲಿ ಜರುಗಿತು.
24 ಜನ ಹಳೆ ವಿದ್ಯಾರ್ಥಿಗಳು ಬೇರೆ ಬೇರೆ ಊರಿನಲ್ಲಿ ನೆಲೆಸಿದ್ದರೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದರು. 23 ವರ್ಷಗಳ ನಂತರ ನಡೆದ ಅಪೂರ್ವ ಸಮಾಗಮದಲ್ಲಿ ಎಲ್ಲರೂ ಧನ್ಯತೆಯಿಂದ ಪರಸ್ಪರ ಮನತುಂಬಿ ಅದೇ ಹಿಂದಿನ ಭಾಂದವ್ಯದಿಂದ ಮಾತಾಡಿ ಉಭಯ ಕುಶಲೋಪಹಾರಿ ವಿಚಾರಿಸಿದರು. ತಾವು ವ್ಯಾಸಂಗ ಮಾಡಿದ ವಿದ್ಯಾ ದೇಗುಲವಾದ ವೇಣೂರು ಪದವಿ ಪೂರ್ವ ಕಾಲೇಜಿಗೆ ಕೊಡುಗೆಯನ್ನು ನೀಡುವ ಬಗ್ಗೆ ಸಮಾರಂಭದಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು.
ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಹಳೇ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ದೂರದ ಕಾಸರಗೋಡಿನ ಬದಿಯಡ್ಕ, ಕುಂಬ್ಳೆ, ಬೆಂಗಳೂರು, ಮಂಗಳೂರು, ಬಂಟ್ವಾಳ ಪುತ್ತೂರು ಕಾರ್ಕಳ ಮೂಡಬಿದ್ರಿ ಮುಂತಾದ ಕಡೆಗಳಿಂದ ಹಳೆ ವಿದ್ಯಾರ್ಥಿಗಳು ಆಗಮಿಸಿ ಶುಭ ಹಾರೈಸಿದರು.
ಸಮಾರಂಭ ನಡೆಸಲು ಅವಕಾಶ ಮಾಡಿಕೊಟ್ಟ ವೇಣೂರು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಿಗೆ, ಉಪನ್ಯಾಸಕ ವೃಂದದವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಅತ್ಯಂತ ಸರಳ ಸಮಾರಂಭವನ್ನು ಹಳೆ ವಿದ್ಯಾರ್ಥಿಯಾಗಿರುವ ಶ್ರೀಮತಿ ಕುಶಲತಾ ಪ್ರಾರ್ಥಿಸಿ, ನವೀನ್ ಪೂಜಾರಿ ಪಚ್ಚೇರಿ ಸ್ವಾಗತಿಸಿದರು. ಜಗನ್ನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವೀಣಾ ಎಸ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು.