ಹೆದ್ದಾರಿ ಅಧಿಕಾರಿಗಳ ಗೈರು-ಕೋರಂ ಕೊರತೆ: ಕುವೆಟ್ಟು ಗ್ರಾಮಸಭೆ ಮುಂದೂಡಿಕೆ

Suddi Udaya

ಕುವೆಟ್ಟು: ಕುವೆಟ್ಟು ಗ್ರಾ.ಪಂ ನ ಗ್ರಾಮ ಸಭೆ ಪಂಚಾಯತ್‌ನ ಅಧ್ಯಕ್ಷೆ ಶ್ರೀಮತಿ ಭಾರತೀ ಎಸ್, ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಫೆ.29ರಂದು ಆರಂಭಗೊಂಡರೂ, ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದಿರುವುದರಿಂದ ಹಾಗೂ ಕೋರಂ ಕೊರತೆಯಿಂದ ಗ್ರಾಮಸಭೆಯನ್ನು ಅನಿವಾರ್ಯವಾಗಿ ಮುಂದೂಡಲಾಯಿತು.
ಸಭೆಯಲ್ಲಿ ನೋಡೆಲ್ ಅಧಿಕಾರಿ ಬಿಸಿಎಂ ಇಲಾಖೆಯ ಜೋಸೆಫ್, ಉಪಾಧ್ಯಕ್ಷ ಗಣೇಶ್ ಕೆ. ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ಸಭೆ ಆರಂಭವಾಗುತ್ತಿದ್ದಂತೆ ಹೆದ್ದಾರಿ ಇಲಾಖೆಯ ಕಾಮಗಾರಿಯಿಂದಾಗಿ ಧೂಳು ಬರುತ್ತಿದೆ. ಜನರ ಆರೋಗ್ಯ ಕೆಡುತ್ತಿದೆ. ಅವರು ಸರಿಯಾಗಿ ನೀರು ಹಾಕುತ್ತಿಲ್ಲ, ಅಧಿಕಾರಿಗಳಿಗೆ ಫೋನ್ ಮಾಡಿದರೂ ಅವರು ಎತ್ತುವುದಿಲ್ಲ, ಗ್ರಾಮಸಭೆಗೆ ಬರಲು ಹೇಳಿದರೂ ಬಂದಿಲ್ಲ ಎಂದು ತಾ.ಪಂ ಮಾಜಿ ಸದಸ್ಯರಾದ ಗೋಪಿನಾಥ್ ನಾಯಕ್, ಪ್ರಭಾಕರ್ ಶೆಟ್ಟಿ ಉಪ್ಪಡ್ಕ ಒತ್ತಾಯಿಸಿದರು.

ನಾನು ಸಹ ಫೋನ್ ಮಾಡಿದ್ದೆ ಗ್ರಾಮಸಭೆಗೆ ಬರಲು ಪತ್ರ ಸಹ ಬರೆದಿದ್ದೇವೆ ಎಂದು ಅಧ್ಯಕ್ಷೆ ಹೇಳಿದರು. ಸಭೆಯಲ್ಲಿ ಕೋರಂ ಸಹ ಇಲ್ಲ ಎಂದು ಧನಂಜಯ್ ಹೆಗ್ಡೆ, ಗೋಪಿನಾಥ್, ರಫೀಕ್ ಮೊದಲಾದವರು ಹೇಳಿ ಸಭೆ ಮುಂದೂಡಿಕೆಗೆ ಆಗ್ರಹಿಸಿದರು.


ಹೆದ್ದಾರಿ ಅಧಿಕಾರಿಗಳು ಬಂದು ಮಾಹಿತಿ ಕೊಡಬೇಕು ನಂತರ ಸಭೆ ಮಾಡಿ ಎಂದು ನಾಗರಿಕರು ಒತ್ತಾಯಿಸಿದರು.
ಲಾಡಿಯಲ್ಲಿ 8 ವಷ೯ಗಳ‌ ಹಿಂದೆ ಹಂಚಿಕೆ ಮಾಡಿದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಆಗದಿರುವ ಬಗ್ಗೆ ಗೋಪಿನಾಥ್ ನಾಯಕ್ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು, ಈ ಬಗ್ಗೆ ಚರ್ಚೆ ನಡೆದಾಗ ಮಾತಾನಾಡಿದ ಗ್ರಾಮ ಲೆಕ್ಕಾಧಿಕಾರಿ ನಾರಾಯಣ ಕುಲಾಲ್ ಫೈಲ್ ಎ.ಸಿ ಕಚೇರಿಯಿಂದ ಈಗ ಸವೆ೯ ಇಲಾಖೆಗೆ ಹೋಗಿದೆ ಜಾಗ ಓವರ್ಲ್ಫಫ್ ಇರುವುದರಿಂದ ಸರಿಯಾಗಬೇಕು ಎಂದು ಸ್ಪಷ್ಟಪಡಿಸಿದರು.

ಎರಂಗಲ್ಲು ಎಸ್.ಸಿ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಇರುವುದನ್ನು ಆ ಭಾಗದ ನಾಗರಿಕರು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಹೆದ್ದಾರಿ ಕಾಮಗಾರಿ ಬಗ್ಗೆ ಚರ್ಚೆ ಮುಂದುವರಿದು, ಅಧಿಕಾರಿಗಳು ಬಾರದಿರುವುದರಿಂದ‌ ಸಭೆ ಮುಂದೂಡಿ, ಕೋರಂ ಕೊರತೆ ಕೂಡಾ ಇದೆ ಎಂದು ನಾಗರಿಕರು ಒತ್ತಾಯಿಸಿದರು.


ಈ ಸಂದರ್ಭ ಪಿಡಿಒ ಇಮ್ತಿಯಾಜ್, ನೋಡೆಲ್ ಅಧಿಕಾರಿ ಜೋಸೆಫ್, ಅಧ್ಯಕ್ಷೆ ಭಾರತೀ ಎಸ್. ಶೆಟ್ಟಿ ಸಭೆ ಮುಂದುವರಿಯಲು ಮನವಿ ಮಾಡಿದರು. ಗ್ರಾ,ಮಸ್ಥರು ಒಪ್ಪಲಿಲ್ಲ, ಕೊನೆಗೆ ಅಧ್ಯಕ್ಷೆ ಸಭೆಯನ್ನು ಮುಂದೂಡುವುದಾಗಿ ಘೋಷಣೆ ಮಾಡುವ ಮೂಲಕ ಸಭೆ ಕೊನೆಗೊಳಿಸಲಾಯಿತು.

Leave a Comment

error: Content is protected !!