ಬೆಳ್ತಂಗಡಿ : ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟೀಯವರಾದ ಡಾ.ಯು.ಸಿ.ಪೌಲೋಸ್‌ರವರಿಗೆ ಸಮಾಜ ಸೇವೆಗಾಗಿ ಅಂತರಾಷ್ಟ್ರೀಯ ಸೀನಿಯರ್ ಚೇಂಬರ್‌ನ 2023-24ನೇ ಸಾಲಿನ ಪ್ರತಿಷ್ಠಿತ “ಭಾರತದ ಜವಾಬ್ದಾರಿಯುತ ಮತ್ತು ಸಕ್ರಿಯ ನಾಗರಿಕ ಪ್ರಶಸ್ತಿ 2023-24 ” ಕೇರಳದ ಕಣ್ಣೂರಿನಲ್ಲಿ ಮಾ.2 ರಂದು ಲಭಿಸಿದೆ.
ಸಿಯೋನ್ ಆಶ್ರಮ ಕಳೆದ 25 ವರ್ಷಗಳಿಂದ ಸಮಾಜದಲ್ಲಿ ಅಸಹಾಯಕತೆಯಿಂದ ಬೀದಿಪಾಲಾಗಿದ್ದ ಮನೋರೋಗಿಗಳು, ಬುದ್ಧಿಮಾಂದ್ಯರು, ಅಂಗವಿಕಲರು, ನಿರ್ಗತಿಕರು ಮತ್ತು ವಿಶೇಷ ಚೇತನ ಮಕ್ಕಳು, ವೃದ್ಧರು, ವಿಧವೆಯರು, ವಿವಿಧ ರೀತಿಯಲ್ಲಿ ದೌರ್ಜನ್ಯಕ್ಕೊಳಪಟ್ಟವರು, ಬಟ್ಟೆಬರೆಯಿಲ್ಲದೆ ಬೀದಿಯಲ್ಲಿ ತಿರುಗುತ್ತಾ ಮೈ ತುಂಬ ಹುಳುವಾಗಿದ್ದವರನ್ನು ಯಾವುದೇ ಜಾತಿ-ಮತ, ಬೇಧ-ಭಾವವಿಲ್ಲದೆ ಮಾತೃವಾತ್ಸಲ್ಯತೆಯಿಂದ ಆರೈಕೆಯನ್ನು ಮಾಡಿ ಮೂಲಭೂತ ಸೌಕರ್ಯಗಳಾದ ಊಟ, ವಸತಿ, ಬಟ್ಟೆ-ಬರೆ ಜೊತೆಗೆ ವೈದ್ಯಕೀಯ ಚಿಕಿತ್ಸೆ ನೀಡಿ, ಪುನರ್ವಸತಿ ವ್ಯವಸ್ಥೆ ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಚಟುವಟಿಕೆಗಳ ಹೊರತಾಗಿ, ಸಿಯೋನ್ ಆಶ್ರಮವು ವಿವಿಧ ಯೋಜನೆಗಳಾದ ಸಿಯೋನ್ ಸ್ವಸಹಾಯ ಸಂಘಗಳು, ಸಮುದಾಯ ಅಭಿವೃದ್ಧಿ, ಮಕ್ಕಳ ಪ್ರಾಯೋಜಕತ್ವ, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ಮತ್ತು ಹಿರಿಯ ನಾಗರಿಕರಿಗೆ ಪಿಂಚಣಿ ಸಮಾಜಮುಖೀ ಕಾರ್ಯಚಟುಚಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಸಿಯೋನ್ ಆಶ್ರಮವು ತನ್ನ ಬೆಳ್ಳಿಹಬ್ಬವನ್ನು2024ರ ಮಾರ್ಚ್ 22ರಂದು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಪ್ರಶಸ್ತಿ ಲಭಿಸಿರುವುದು ಸಕಾಲಿಕವಾಗಿದೆ.