ವೇಣೂರು: ಇಂತಹ ಧಾರ್ಮಿಕ ಪೂಜೆ, ಪುರಸ್ಕಾರಗಳು ಜನರ ಮಧ್ಯೆ ಶಾಂತಿ, ನೆಮ್ಮದಿ, ಸಹಬಾಳ್ವೆಯನ್ನು ಸೃಷ್ಟಿಸುತ್ತದೆ. ಧಾರ್ಮಿಕ ಕಾರ್ಯಗಳ ಜತೆ ಸಾಮಾಜಿಕ ಚಟುವಟಿಕೆಗಳು ನಡೆದಾಗ ರಾಮರಾಜ್ಯದ ಕನಸು ಈಡೇರುತ್ತದೆ ಎಂದು ಮಂಗಳೂರು ಜಿ.ಪಂ. ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್ ಹೇಳಿದರು.
ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ ಬಜಿರೆ ವತಿಯಿಂದ ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್, ಶ್ರೀ ಸತ್ಯನಾರಾಯಣ ಭಜನ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಪ್ರಗತಿಬಂಧು ಒಕ್ಕೂಟ ಬಜಿರೆ ಬಿ. ಇವುಗಳ ಸಂಯುಕ್ತ ಆಶ್ರಯದಲ್ಲಿ ಹೊಸಪಟ್ಣದಲ್ಲಿ ಜರಗಿದ ೪೫ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಜರಗಿದ ಧಾರ್ಮಿಕಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮಾಜಕ್ಕೆ ಶಾಶ್ವತ ಕೊಡುಗೆ:
ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೂ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಎಲ್ಲಾ ಜನತೆ ಪಡೆದುಕೊಳ್ಳಬೇಕು. ಸಮಾಜಕ್ಕೆ ಶಾಶ್ವತ ಕೊಡುಗೆ ನೀಡಿರುವ ಇಲ್ಲಿಯ ಜಂಟಿ ಸಮಿತಿಯ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಅವರು ಮಾತನಾಡಿ, ಇಲ್ಲಿ ವರ್ಷಂಪ್ರತಿ ಒಂದೇ ಕುಟುಂಬದವರಂತೆ ಒಟ್ಟುಸೇರಿ ಪೂಜಾ ಕೈಂಕರ್ಯವನ್ನು ನಡೆಸಿಕೊಡುತ್ತಿರುವುದು ಬರುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಧಾರ್ಮಿಕ ಉತ್ಸವಗಳು ಇಲ್ಲಿ ನಿರಂತರವಾಗಿ ನಡೆದುಕೊಂಡು ಬರುವಂತಾಗಲಿ ಎಂದರು.
ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಗಳಿಂದ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಉದ್ದೀಪನಗೊಳ್ಳುವಂತಾಗಲಿ ಎಂದರು.
ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ವೇಣೂರು ಬ್ರಹ್ಮಶ್ರೀ ಗು.ನಾ.ಸೇ. ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಗುಂಡೂರಿ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ವೇಣೂರು ಗ್ರಾ.ಪಂ. ಮಾಜಿ ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ, ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್, ತಾಲೂಕು ಆರಾಧನಾ ಸಮಿತಿ ಸದಸ್ಯ ಬಾಲಕೃಷ್ಣ ಭಟ್, ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಗೌರವಾಧ್ಯಕ್ಷ ಬಿ. ಪದ್ಮನಾಭ ರೈ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್‍ಮೇರು, ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸನ್ಮಾನ, ಪ್ರತಿಭಾ ಪುರಸ್ಕಾರ
ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ೭ರ ಸ್ಪರ್ಧಾಳು ಕು| ಆಪ್ತಿ ಬಿ. ಪೂಜಾರಿ ಅವರನ್ನು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಹರೀಶ್ಚಂದ್ರ ಎಚ್‌ಎಎಲ್ ಅವರ ವತಿಯಿಂದ ಒದಗಿಸಲಾದ ವಿದ್ಯಾರ್ಥಿವೇತನವನ್ನು ಶಿಕ್ಷಣ ಕ್ಷೇತ್ರದ ಸ್ಥಳೀಯ ಅಗ್ರಗಣ್ಯ ಸಾಧಕಿಯರಾದ ಕುಶಲ, ಭನ್ವಿತಾ ಹಾಗೂ ಸಾನ್ವ ಅವರಿಗೆ ವಿತರಿಸಲಾಯಿತು.
ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಜಾರಿಗೆದಡಿ ಸ್ವಾಗತಿಸಿ, ಪ್ರಧಾನ ಸಂಚಾಲಕ ಗಣೇಶ್ ಪೂಜಾರಿ ಹೊಸಪಟ್ಣ ವಂದಿಸಿದರು. ಗೋಪಾಲ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ವೈದಿಕ-ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ಬಳಿಕ ರಾತ್ರಿ ಹೊಸಪಟ್ಣ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಪಿಂಗಾರ ಕಲಾವಿದರ ಬೆದ್ರ ಅವರಿಂದ ಕದಂಬ ಹಾಸ್ಯಮಯ ನಾಟಕ ಜರಗಿತು.