ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ವನ್ಯಜೀವಿ ವಿಭಾಗದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಹತೋಟಿಗೆ ಬಂದಿದ್ದು ಕಾಡ್ಗಿಚ್ಚಿನ ಭಯ ದೂರವಾಗಿದೆ.
ಮಾ.16 ಶನಿವಾರ ಸಂಜೆಯ ಹೊತ್ತಿಗೆ ಕುದುರೆಮುಖ ಪೀಕ್ ಕಡೆಯಿಂದ ಆವರಿಸಿದ ಬೆಂಕಿ ನಾವೂರು ಗ್ರಾಮದ ತೊಳಲಿಯ ಏಳುಸುತ್ತು ವರೆಗೆ ವ್ಯಾಪಿಸಿತ್ತು.
ಭಾನುವಾರ ಬೆಳಿಗ್ಗೆ ಬೆಳ್ತಂಗಡಿ ಮತ್ತು ಕುದುರೆಮುಖ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರುವ ಕಾರ್ಯಾಚರಣೆ ಆರಂಭಿಸಿದ್ದು ಸೋಮವಾರ ಸಂಜೆಯ ಹೊತ್ತಿಗೆ ಬೆಂಕಿ ಹತೋಟಿಗೆ ಬಂದಿದೆ. ಕುದುರೆಮುಖ ಕಡೆಯಿಂದ ಒಣಹುಲ್ಲಿಗೆ ಆವರಿಸಿದ ಬೆಂಕಿ ನಾವೂರು ತನಕವು ಬಂದಿದೆ. ಸುಮಾರು ಎರಡಾಳು ಎತ್ತರದ ಒಣಹುಲ್ಲಿಗೆ ಹಿಡಿಯುತ್ತಾ ಬಂದ ಬೆಂಕಿಯ ಕೆನ್ನಾಲಿಗೆ 10 ಕಿ.ಮೀ.ದೂರದವರೆಗೂ ಗೋಚರಿಸುತ್ತಿತ್ತು.
ಒಣ ಹುಲ್ಲಿಗೆ ಬೆಂಕಿ ಹಿಡಿದರೆ ವೇಗವಾಗಿ ಹರಡುತ್ತದೆ ಹಾಗೂ ಹೆಚ್ಚಾಗಿ ಹುಲ್ಲು ಇರುವ ಪ್ರದೇಶವನ್ನು ಮಾತ್ರ ಸುಡುತ್ತಾ ಮುಂದುವರಿಯುತ್ತದೆ. ಮಂದವಾಗಿ ಬೀಸುತ್ತಿದ್ದ ಗಾಳಿಯು ಬೆಂಕಿ ಹೆಚ್ಚು ಪ್ರಸರಿಸಲು ಕಾರಣವಾಗಿತ್ತು.
ಅರಣ್ಯ ಪ್ರವೇಶಿಸಿಲ್ಲ:
ಕೇವಲ ಒಣಹುಲ್ಲನ್ನು ಸುಟ್ಟ ಬೆಂಕಿ ಸಕಾಲಿಕ ಕಾರ್ಯಾಚರಣೆಯಿಂದ ಅರಣ್ಯವನ್ನು ಪ್ರವೇಶಿಸಿಲ್ಲ ಹಾಗೂ ಅರಣ್ಯ ಸಂಪತ್ತಿಗೆ ಯಾವುದೇ ರೀತಿ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ ಬಾಬು ನಾವೂರು ಪ್ರದೇಶಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು.