ಬೆಳ್ತಂಗಡಿ: ಮಕ್ಕಳ ಕಲಿಕಾ ಮಟ್ಟವನ್ನು ಒರೆಗೆ ಹಚ್ಚುವ ಪರೀಕ್ಷೆಗಳು ವರ್ಷದಿಂದ ವರ್ಷಕ್ಕೆ ಗೊಂದಲದ ಗೂಡಾಗಿ ಪರಿವರ್ತಿತವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಅವರ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಪರೀಕ್ಷೆಗೆ ಸಂಬಂಧಿಸಿದ ಈ ಎಲ್ಲಾ ಗೊಂದಲಗಳನ್ನು ಪರಿಹರಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 5,8,9 ನೇ ತರಗತಿಯ ಎರಡು ಪರೀಕ್ಷೆಗಳು ಮುಗಿಯುತ್ತಿದ್ದಂತೆ ಉಳಿದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ಭೌತಶಾಸ್ತ್ರ ವಿಷಯ ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಂದಂಕದ ಪ್ರಶ್ನೆಗಳ (ಎಂ.ಸಿ.ಕ್ಯೂ) ಪೈಕಿ ಹಲವು ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರೂಪಿಸುವಂತೆ ನೀಡಲಾಗಿದೆ. ಇದು ಹಲವು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಟ್ವಿಸ್ ಎಂಬ ನೆಪದಲ್ಲಿ ಒಂದಂಕದ ಪ್ರಶ್ನೆಗಳ ಮೇಲೂ ಇದನ್ನು ಪ್ರಯೋಗಿಸಿರುವುದು, ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ನೀಡಲಾಗಿರುವುದು, ಪರೀಕ್ಷಾ ಮಾರ್ಗಸೂಚಿಗಳನ್ನು ಪಾಲಿಸದಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ದ್ವಿತೀಯ ಪಿ.ಯು.ಸಿ. ಭೌತಶಾಸ್ತ್ರ ಪರೀಕ್ಷೆಗೆ ಕೃಪಾಂಕಗಳನ್ನು ನೀಡಲಾಗುತ್ತದೆ ಎಂಬ ಆದೇಶವೊಂದು ಹರಿದಾಡುತ್ತಿದೆ. ಆದರೆ ಪರೀಕ್ಷಾ ಮಂಡಳಿ ಇದುವರೆಗೆ ಯಾವುದನ್ನೂ ಸ್ಪಷ್ಟಗೊಳಿಸಿರುವುದಿಲ್ಲ.
ಹಾಗೇಯೇ ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಆಯಾ ಕಾಲೇಜಿನ ವಿದ್ಯಾರ್ಥಿಗಳಗೆ ತಮ್ಮ ಕಾಲೇಜಿನಲ್ಲಿ ಪರೀಕ್ಷೆ ಬರೆಯುವ ಅವಕಾಶವಿರುವುದಿಲ್ಲ. ಇದರಿಂದ ಕೆಲವು ಕಾಲೇಜಿನ ವಿದ್ಯಾರ್ಥಿಗಳು ಅದೇ ತಾಲೂಕಿನ ಇನ್ನೊಂದು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಾದರೆ 40 ರಿಂದ 50 ಕಿ.ಮೀ. ಕ್ರಮಿಸಬೇಕು ಇದು ಕೂಡ ವಿದ್ಯಾರ್ಥಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದವರು ಪತ್ರದಲ್ಲಿ ಉಲ್ಲೇಖಸಿ ಗಮನಹರಿಸುವಂತೆ ತಿಳಿಸಿದ್ದಾರೆ.