ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಲೆಗೈದ ಪ್ರಕರಣ: 6 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

Suddi Udaya

ಬೆಳ್ತಂಗಡಿ: ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಲೆಗೈದು ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು 5 ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ

12 ದಿನಗಳ ಹಿಂದೆ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್ (45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ (56), ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ತುಮಕೂರಿಗೆ ತೆರಳಿದ್ದರು. ಈ ಮೂವರು ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ‘ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ, ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ’ ಎಂದು ಸುಳ್ಳು ಹೇಳಿ ಆರೋಪಿಗಳು ಈ ಮೂವರನ್ನು ಹಣ ದೋಚುವ ಪ್ಲಾಂಟನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಮೂವರ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ.

Leave a Comment

error: Content is protected !!