ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುವ ಐಟಿಐ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವದ್ಯೋಗ ತರಬೇತಿ ನೀಡುವ ಜತೆಗೆ ಸ್ವಾವಲಂಬಿ ಜೀವನ ನಡೆಸಲು ಬೇಕಾದ ನಾಯಕತ್ವ ಗುಣ, ಆತ್ಮವಿಶ್ವಾಸ ಮೊದಲಾದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಾ.22 ರಂದು ಅವರು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಕಳೆದ ಎರಡು ವರ್ಷಗಳಿಂದ ನಮ್ಮ ಸಂಸ್ಥೆಗಳ ಮೌಲ್ಯಮಾಪನ ಮಾಡುತ್ತಿರುವುದರಿಂದ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಸಹಕಾರಿಯಾಯಿತು. ಇದರಿಂದ ಇಂದು ನಮ್ಮ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲೇ ಉತ್ತಮ ಶಿಕ್ಷಣ ಸಂಸ್ಥೆಗಳು ಎಂದು ಹೆಸರು ಬರಲು ಕಾರಣವಾಗಿದೆ. ಈ ಪೈಕಿ ಎಸ್ ಡಿ ಎಂ ಮಹಿಳಾ ಐಟಿಐ ಸಂಸ್ಥೆ ಕೂಡ ಉತ್ತಮ ಶ್ರೇಣಿಯನ್ನು ಕಾಯ್ದುಕೊಂಡಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್ ರಮ್ಯಾ ಸಂಜಯ್, “ಮಹಿಳೆಯರು ಸಮಾಜವನ್ನು ನಿರ್ಮಾಣ ಮಾಡಲು ಹೊರಟಿರುವ ಈ ಸಂದರ್ಭದಲ್ಲಿ ಉತ್ತಮ ಶಿಕ್ಷಣ ಹಾಗೂ ಪ್ರೋತ್ಸಾಹ ನೀಡುವ ಎಸ್ ಡಿ ಎಂ ಮಹಿಳಾ ಐಟಿಐನಂತಹ ಸಂಸ್ಥೆಗಳು ಸಮಾಜದ ಆಸ್ತಿ” ಎಂದು ಬಣ್ಣಿಸಿದರು.
ಮುಖ್ಯ ಅತಿಥಿ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರೊಡಕ್ಷನ್ ಡಿಪಾರ್ಟ್ಮೆಂಟ್ ನ ಜನರಲ್ ಮ್ಯಾನೇಜರ್ ಪ್ರಸನ್ನ ಕುಮಾರ್ ಅವರು ಮಾತನಾಡಿದರು. “ಆಸಕ್ತಿಯಿಂದ ಕೆಲಸ ಮಾಡಿ ಎಲ್ಲರ ನಂಬಿಕೆ ಗಳಿಸಿ. ಇಂದಿನ ತಾಂತ್ರಿಕ ಯುಗದಲ್ಲಿ ಹೊಸ ಹೊಸ ಆವಿಷ್ಕಾರ ಅತೀ ಅಗತ್ಯ. ಅದಕ್ಕಾಗಿ ಕಲಿಕೆ ನಿರಂತರವಾಗಿರಲಿ. ವಿದ್ಯಾರ್ಥಿನಿಯರು ಸ್ವೋದ್ಯೋಗ ಮಾಡಲು ಮುಂದೆ ಬರಬೇಕು” ಎಂದು ಕರೆಕೊಟ್ಟರು.
ಇನ್ನೋರ್ವ ಮುಖ್ಯ ಅತಿಥಿ, ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ.)ಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ ಅವರು ಮಾತನಾಡಿ, ಸಾಧನೆಗೆ ದೃಢವಾದ ಇಚ್ಛಾಶಕ್ತಿ ಮತ್ತು ಹಂಬಲದ ಜತೆಗೆ ಸಕಾರಾತ್ಮಕ ಯೋಚನೆ, ವೃತ್ತಿಯಲ್ಲಿ ಶ್ರೇಷ್ಠತೆ, ಉತ್ತಮ ವ್ಯಕ್ತಿತ್ವ, ತಾಳ್ಮೆ, ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಜೀವನ ಮೌಲ್ಯಗಳು ಅಗತ್ಯ ಎಂದು ಹೇಳಿದರು.
“ಜೀವಕ್ಕೆ ಒಂದೇ ಅವಕಾಶ. ಆದರೆ ಜೀವನಕ್ಕೆ ತುಂಬಾ ಅವಕಾಶ ಇದೆ. ಆದುದರಿಂದ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಂಡು ಸಮಾಜದ ಹಾಗೂ ದೇಶದ ಉತ್ತಮ ನಾಯಕಿಯರಾಗಿ” ಎಂದು ಅವರು ಸಲಹೆ ನೀಡಿದರು.
ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ವಾಚಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಮಂಗಲಾ ಜೈನ್ ಬಹುಮಾನ ವಿತರಣೆ ಪಟ್ಟಿ ವಾಚಿಸಿದರು.
ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಸ್ವಾಗತಿಸಿದರು. ದಿವ್ಯಾ ವಂದಿಸಿದರು. ಶಾಲಿನಿ ಡಿ. ಕಾರ್ಯಕ್ರಮ ನಿರೂಪಿಸಿದರು.