ಎ.8-17: ಶ್ರೀ ಕ್ಷೇತ್ರ ಓಡೀಲುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ

Suddi Udaya

ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಡಂಗಡಿ, ಓಡಿಲ್ನಾಳ, ಕುವೆಟ್ಟು, ಸೋಣ0ದೂರು ಗ್ರಾಮಗಳ ಭಕ್ತರ ಸಹಕಾರದಿಂದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ಜಾತ್ರೋತ್ಸವವು
ಏಪ್ರಿಲ್ 8ರಿಂದ 17ರವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಲಿದೆ ಎಂದು ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಹೇಳಿದರು.


ಅವರು ಮಾ.26ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ನಿರಂತರ ಎರಡು ತಿಂಗಳಿಂದ ಸುಮಾರು 3500 ಜನರು ಶ್ರಮದಾನ ಮಾಡಿದ್ದು, ಹೆಚ್ಚಿನ ಎಲ್ಲಾ ಕೆಲಸಗಳು ಶ್ರಮದಾನ ಮೂಲಕ ಸಾಗುತ್ತಿದೆ. ಈಗಾಗಲೇ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶ್ರೀ ದೇವರ ಗರ್ಭಗುಡಿಯ ಎಡ ನಾಳಿಯ ಮತ್ತು ತೀರ್ಥ ಮಂಟಪದ ಚಾವಣಿಗೆ ತಾಮ್ರದ ಹೊದಿಕೆ, ದೇವಸ್ಥಾನದ ಒಳಂಗಣಕ್ಕೆ ಗ್ರಾನೈಟ್ ಅಳವಡಿಕೆ, ಶ್ರೀ ದೇವರಿಗೆ ಪುಷ್ಕರಣೆ, ನಾಗನ ಕಟ್ಟೆ, ಅಶ್ವತ ಕಟ್ಟೆ, ದೇವರ ಕಟ್ಟೆ, ಅರ್ಚಕರ ವಸತಿಗೃಹ, ಭೋಜನ ಗ್ರಹ, ದೇವಸ್ಥಾನದ ಒಳಂಗಣ ಮತ್ತು ಹೊರಾಂಗಣದ ಆವರಣ ಗೋಡೆ, ಶೌಚಾಲಯ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ರೂ. 3.50ರಿಂದ 4 ಕೋಟಿಗಿಂತಲೂ ಅಧಿಕ ವೆಚ್ಚ ತಗಲಿದೆ. ಒಟ್ಟು ರೂ. 5 ಕೋಟಿಯಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಪಡಂಗಡಿ ಗುರುವಾಯನಕೆರೆ, ಓಡಿಲ್ನಾಳ, ಮಾಲಾಡಿ, ಪಣಕಜೆ ಮದ್ದಡ್ಕದಿಂದ ಒಟ್ಟು ಸೇರಿ ಹೊರಕಾಣಿಕೆ ನಡೆಯಲಿದ್ದು, ಕಿನ್ನಿಗೋಳಿಯಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ಕಾಶಿ ಶೆಟ್ಟಿ ಇವರ ಸೇವಾರ್ಥದಲ್ಲಿ ನಿರ್ಮಾಣಗೊಂಡ ಗೋಪುರವನ್ನು ಉದ್ಘಾಟಿಸಿ. ಅಲ್ಲಿಂದ ವಿಶಿಷ್ಟ ರೀತಿಯಲ್ಲಿ ಹೊರ ಕಾಣಿಕೆ ದೇವಸ್ಥಾನಕ್ಕೆ ಹೊರಡಲಿದೆ.
ರೂ 5,000 ಕಳಸ ಕೂಪನ್ 1008ಜನರಿಗೆ ಮಾತ್ರ ನೀಡಲಿದ್ದೇವೆ. ಸೇವೆ ಮಾಡುವವರಿಗೆ ಅಕ್ಕಿ, ಬೆಲ್ಲ, ಸಕ್ಕರೆ ಮುಂತಾದ ವಸ್ತುಗಳು ನಮ್ಮ ಕೌಂಟರ್ ನಲ್ಲಿದೆ. ಬ್ರಹ್ಮ ಕಲಶೋತ್ಸವದ ಒಂದು ದಿನ ಬೆಳಿಗ್ಗೆ 12 ಗಂಟೆಯಿಂದ 1 ಗಂಟೆ ತನಕ ಮಹಿಳೆಯರಿಗೆ ವಸ್ತ್ರದಾನ. ಸಾರ್ವಜನಿಕರಿಗೆ ಗಿಡಗಳು, ಒಬ್ಬರಿಗೆ ಗೋ ದಾನ ನೀಡಲಿದ್ದೇವೆ.


ದೇವಸ್ಥಾನದ ಕೆಳಗಡೆ ಅಭಯ ನಂದಿ ಏಪ್ರಿಲ್ 2ರಂದು ಪ್ರತಿಷ್ಠೆಗೊಳ್ಳಲಿದೆ. ಜನರಿಗೆ ಪೂಜೆ ಮಾಡಲು ಅವಕಾಶ ಇದೆ. ಮಹಿಳಾ ತಂಡದವರಿಂದ ಆಮಂತ್ರಣ ಪತ್ರಿಕೆ ವಿತರಣೆ ಆಗುತ್ತಿದೆ. ಕ್ಷೇತ್ರಕ್ಕೆ ಸುಮಾರು 70ಸಾವಿರ ದಿಂದ 1ಲಕ್ಷ ಜನರು ಬರುವ ನಿರೀಕ್ಷೆ ಇದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಕೋಶಾಧಿಕಾರಿ ವಸಂತಗೌಡ ವರಕಬೆ, ಆರ್ಥಿಕ ಸಮಿತಿ ಸಂಚಾಲಕರಾದ ಗಂಗಾಧರ ಕೆವುಡೇಲು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ ಸ್ವಾಗತಿಸಿ ಧನ್ಯವಾದವಿತ್ತರು.

Leave a Comment

error: Content is protected !!