ಮಾ.31-ಎ.4: ಸುಲ್ಕೇರಿ ನಾವರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಮಾ.31 ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Suddi Udaya

ಸುಲ್ಕೇರಿ : ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ನಡ್ವಂತ್ತಾಡಿ ಬಾಲಕೃಷ್ಣ ಪಾಂಗಣ್ಣಾಯರ ನೇತೃತ್ವದಲ್ಲಿ ಮಾ.31 ರಿಂದ ಎ.4 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದ್ದಾರೆ.


ಮಾ.31 ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ಅಪರಾಹ್ನ 3 ಕ್ಕೆ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಸಂಜೆ 5ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದ್ದು ಇದರ ಉದ್ಘಾಟನೆಯನ್ನು ಶ್ರೀಲಕ್ಷ್ಮೀ ಇಂಡಸ್ಟ್ರೀಸ್ ‘ಕನಸಿನ ಮನೆ’ ಮಾಲಕ ಕೆ. ಮೋಹನ್ ಕುಮಾರ್ ನೆರವೇರಿಸಲಿದ್ದಾರೆ. ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7.30 ರಿಂದ ಶ್ರೀರಾಮ ಶಾಲೆ ಸುಲ್ಕೇರಿ ಇಲ್ಲಿನ ಮಕ್ಕಳಿಂದ ಸಾಂಸ್ಕೃತಿಕ ವೈಭವ ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ಊರವರಿಂದ ನೃತ್ಯ ವೈವಿಧ್ಯ ನಡೆಯಲಿದೆ.

ಮಾ.31 ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
ಅಪರಾಹ್ನ 3.30 ಕ್ಕೆ ಕುಣಿತ ಭಜನೆ, ಕೀಳು ಕುದುರೆ, ಚೆಂಡೆ ವಾದ್ಯ, ವಿವಿಧ ವೇಷ ಭೂಷಣಗಳೊಂದಿಗೆ ವೈಭವಯುತ ಅಭೂತಪೂರ್ವ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದಲ್ಲಿ ಹಸಿರುವಾಣಿ ಮೆರವಣಿಗೆ ಚಾಲನೆಯನ್ನು ಉದ್ಯಮಿ ಪ್ರವೀಣ್ ಕುಮಾರ್ ಇಂದ್ರ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ವಹಿಸಲಿದ್ದಾರೆ. ನಾಲ್ಕೂರು ಬಳಂಜ, ತೆಂಕಕಾರಂದೂರು ಕರಂಬಾರು, ಶಿರ್ಲಾಲು, ಸುಲ್ಕೇರಿಮೊಗ್ರು ಅಳದಂಗಡಿ, ಪಿಲ್ಯ, ಕುದ್ಯಾಡಿ, ನಾವರ, ಸುಲ್ಕೇರಿ ಮತ್ತು ನಾರಾವಿ ವಲಯದ ವಿವಿಧ ಗ್ರಾಮಗಳಿಂದ ಹೊರೆಕಾಣಿಗೆ ದೇವರಿಗೆ ಸಮರ್ಪಣೆಯಾಗಲಿದೆ.


ಎ.01 ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮ ನಡೆಯಲಿದೆ. 9.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಾವರ ಪ್ರಗತಿ ಬಂಧು ಒಕ್ಕೂಟದ ಪದಗ್ರಹಣ ಸಮಾರಂಭ. ಸಂಜೆ 5 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ೧೨ರಿಂದ ಅರುಣ್ ಪಿಲ್ಯ ಮತ್ತು ತಂಡದಿಂದ ಕೊಳಲು ವಾದನ. ರಾತ್ರಿ 7ರಿಂದ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದವರಿಂದ ಯಕ್ಷಗಾನ ‘ಮನ್ಮಥ ಸುಂದರಿ’ ನಡೆಯಲಿದೆ.


ಎ.02 ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 7ರಿಂದ ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ಸಾಮಾಜಿಕ ನಾಟಕದ ಇತಿಹಾಸದಲ್ಲಿಯೇ ಅದ್ದೂರಿ ರಂಗ ವಿನ್ಯಾಸದ ನೂತನ ಕುತೂಹಲಭರಿತ ‘ಶಾಂಭವಿ’ ತುಳು ಹಾಸ್ಯಮಯ ನಾಟಕ ನಡೆಯಲಿದೆ.


ಮಾ.03 ರಂದು ಬೆಳಗ್ಗೆ 9.44 ರಿಂದ 10.52 ವೃಷಭ ಲಗ್ನ ಸುಮೂಹೂರ್ತದಲ್ಲಿ ಗಣಪತಿ ಹಾಗೂ ಅನ್ನಪೂರ್ಣೇಶ್ವರಿ ದೇವರ ಕಲಶಾಭಿಷೇಕ, ಸಂಜೆ ೪ರಿಂದ ಮಹಾಲಿಂಗೇಶ್ವರ ದೇವರಿಗೆ ಪರಿಕಲಶ ಸಹಿತ ಬಹ್ಮಕಲಶ, ಸಂಜೆ ೫ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10 ರಿಂದ ಮಕ್ಕಳ ಕಲರವ. ರಾತ್ರಿ 7ರಿಂದ ಗುರುಶ್ರೀ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ‘ನಾಟ್ಯನಿಲಯಂ’ ಇವರ ಶಿಷ್ಯವೃಂದದವರಿಂದ ‘ನೃತ್ಯ ಸಂಕಲ್ಪಂ’ ನಡೆಯಲಿದೆ.


ಮಾ.04 ರಂದು ಬೆಳಗ್ಗೆ 9.45 ರ ಸುಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪರಿಕಲಶ ಸಹಿತ ಬ್ರಹ್ಮ ಕಲಶಾಭಿಷೇಕ, ನ್ಯಾಸಪೂಜೆ, ಮಹಾಪೂಜೆ, ಸಂಜೆ ೪ರಿಂದ ದೊಡ್ಡ ರಂಗ ಪೂಜೆ, ದೇವರ ಉತ್ಸವ ಬಲಿ, ವಸಂತ ಕಟ್ಟೆಪೂಜೆ, ದೈವಗಳಿಗೆ ಗಗ್ಗರಸೇವೆ, ದೈವ ದೇವರ ಬೇಟಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ 11ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶುಭಾಂಶನೆ ಮಾಡಲಿದ್ದಾರೆ.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 7ರಿಂದ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯಿಸುವ ಸೂಪರ್ ಹಿಟ್ ಯಶಸ್ವಿ ನಾಟಕ ಕಥೆ ಎಡ್ಡೆಂಡು ನಡೆಯಲಿದೆ.
ಎ.೫ರಂದು ಬೆಳಿಗ್ಗೆ ಸಂಪ್ರೊಕ್ಷಣ ಕಲಶಾರಾಧನೆ, ಕಲಶಾಭಿಷೇಕ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.

ಪ್ರತಿದಿನ ಪೂರ್ವಾಹ್ನ 10ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

Leave a Comment

error: Content is protected !!