ಕುಪ್ಪೆಟ್ಟಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಣಿಯೂರು ಕಸಬಾ ಇಲ್ಲಿ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಹರ್ಷಲಾ ರವರು ಮಾ. 31 ರಂದು ಸೇವಾ ನಿವೃತ್ತಿ ಪಡೆದಿದ್ದು, ಎ.05 ರಂದು ಕುಪ್ಪೆಟ್ಟಿ ಕ್ಲಸ್ಟರ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಳ್ತಂಗಡಿ ಪ್ರಾ.ಶಾ.ಶಿ. ಸಂಘದ ಅಧ್ಯಕ್ಷರಾದ ಕಿಶೋರ್ ಕುಮಾರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮಾಧವ ಗೌಡ ಹಾಗೂ ಶ್ರೀಮತಿ ರೀಟಾರವರು ತಮ್ಮ ಅನಿಸಿಕೆಗಳನ್ನು ಹೇಳಿದರು. ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿ ಸುರೇಶ್ ಮಾಚಾರ್ ರವರು ಸಂದರ್ಭೋಚಿತ ಮಾತುಗಳನ್ನಾಡಿದರು. ತಾಲೂಕು ಮುಖ್ಯೋಪಾಧ್ಯಾಯರ ಸಂಘದ ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ಚಂದ್ರಾವತಿಯವರು ಶುಭ ಹಾರೈಸಿದರು. ಕರಾಯ ಕೇಂದ್ರ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಶರೀಫ್, ತುರ್ಕಳಿಕೆ ಶಾಲೆಯ ಮುಖ್ಯ ಗುರುಗಳಾದ ತಿಪ್ಪಣ್ಣ ರವರು, ನೆಕ್ಕಿಲು ಶಾಲೆಯ ಮುಖ್ಯ ಶಿಕ್ಷಕರಾದ ಬಿರಾದಾರ್ ರವರು ನಿವೃತ್ತ ಶಿಕ್ಷಕಿಯವರಿಗೆ ಶುಭವನ್ನು ಹಾರೈಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮತ್ತು ಕುಪ್ಪೆಟ್ಟಿ ಕ್ಲಸ್ಟರ್ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಹರ್ಷಲಾರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಹರ್ಷಲಾರವರು ತಮ್ಮ ಸೇವಾವಧಿಯ ಸವಿನೆನಪುಗಳನ್ನು ಮೆಲುಕು ಹಾಕಿದರು.
ಕುಪ್ಪೆಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸಂಧ್ಯಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಪೆರ್ಲಬೈಪಾಡಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕುಪ್ಪೆಟ್ಟಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವನಿತಾ ರವರು ಸ್ವಾಗತಿಸಿ, ಕಾರಿಂಜ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ರವರು ಧನ್ಯವಾದವಿತ್ತರು.