ಉಜಿರೆ : ಹಿರಿಯ ವಿದ್ಯಾರ್ಥಿಯಾಗಿ ಮತ್ತೆ ಕಲಿತ ಕಾಲೇಜಿನತ್ತ ಬರುವಾಗ ಅಭಿಮಾನ ಹೆಚ್ಚುತ್ತದೆ. ಒಂದು ಸಣ್ಣ ಬೀಜವಾಗಿ ಸಂಸ್ಥೆಗೆ ಹೊಕ್ಕ ನಾವು ಇಂದು ಸಮಾಜಕ್ಕೆ ನೆರಳು ನೀಡುವ ಮರವಾಗಿ ಹೊರ ಹೋಗಿದ್ದೇವೆ. ಇದಕ್ಕೆ ನಾವು ಎಂದಿಗೂ ಎಸ್.ಡಿ.ಎಂ. ಸಂಸ್ಥೆಗೆ ಚಿರಋಣಿಯಾಗಿದ್ದೇವೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಕಾರ್ಯಕ್ರಮದ ಮುಖ್ಯ ಅತಿಥಿ ಕುಮಾರಿ ದೇವಿಕಾ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ಜರುಗಿದ ಹಿರಿಯ ವಿದ್ಯಾರ್ಥಿಗಳ ಸಮಾಗಮ ‘ದರ್ಪಣ’ ಕಾರ್ಯಕ್ರಮವನ್ನು ಇನ್ನೋರ್ವ ಅತಿಥಿಯಾಗಿ ಆಗಮಿಸಿದ ನಮ್ಮ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಡಾ. ಅರ್ಷಿಯಾ ಇವರು ಉದ್ಘಾಟಿಸಿ ಅನುಭವಗಳು ಕಹಿಯಾಗಿರಲಿ ಅಥವಾ ಸಿಹಿಯಾಗಿರಲಿ ಆದರೆ ನೆನಪುಗಳು ಮಾತ್ರ ಸಿಹಿಯಾಗಿರುತ್ತದೆ. ನಾವು ಎಂದಿಗೂ ಜೀವನದಲ್ಲಿ ಆಶಾವಾದಿಗಳಾಗಿರಬೇಕು. ಧನಾತ್ಮಕವಾಗಿ ಯೋಚಿಸಬೇಕು ಹಾಗೂ ಜೀವನದ ಸಾಧನೆಗೆ ಕನಸಿನ ಅಗತ್ಯವಿದೆ ಎಂದು ತಿಳಿಸಿದರು.
ಬಿ.ಎಡ್. ಎಂಬುದು ಅದ್ಭುತವಾದ ಪಯಣ ನಾವೆಲ್ಲಾ ಕೂಡುಕೊಳ್ಳುವುದರಿಂದ ಮಾತ್ರ ಒಂದು ಸಂಘಟನೆ ಅಭಿವೃದ್ಧಿಯಾಗುತ್ತದೆ. ಶಿಕ್ಷಕರು ಜವಾಬ್ದಾರಿಯುತವಾಗಿ ಹಾಗೂ ಜಾಗರೂಕತೆಯಿಂದ ಶಿಕ್ಷಣ ಸಂಸ್ಠೆಯಲ್ಲಿ ಸೇವೆ ಸಲ್ಲಿಸುವುದು ಅನಿವಾರ್ಯವಾಗಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಧನುಷ್ ಕೆ ಪಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಕಾಲೇಜಿಗೆ ಮತ್ತೆ ಬಂದಾಗ ಸಂತೋಷವಾಗುತ್ತದೆ. ಕಾಲೇಜಿನ ಪ್ರತಿಯೊಂದು ಕಾರ್ಯಕ್ರಮಕ್ಕೆ ಹಿರಿಯ ವಿದ್ಯಾರ್ಥಿಗಳ ಬೆಂಬಲಬೇಕು ಹಾಗೂ ಇದರಿಂದ ಕಾಲೇಜಿನ ನೆನಪುಗಳು ಮರುಕಳಿಸುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ಪ್ರಸ್ತಾವಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿಗಳಾದ ಶೀತಲ್ ಸ್ವಾಗತಿಸಿ. ಪವಿತ್ರ ವಂದಿಸಿ, ಮಮತಾ ನಿರೂಪಿಸಿದರು.