April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪಾತಾಳ ವೆಂಕಟರಮಣ ಭಟ್ಟರಿಗೆ ಕುರಿಯ ಪ್ರಶಸ್ತಿ

ಬೆಳ್ತಂಗಡಿ: ಯಕ್ಷ ಶಾಂತಲಾ ಎಂದೇ ಜನಪ್ರಿಯರಾಗಿದ್ದ ತೆಂಕು, ಬಡಗು ಎರಡೂ ತಿಟ್ಟಿನಲ್ಲಿ ಕಲಾವ್ಯವಸಾಯ ಮಾಡಿದ ಪ್ರಸಿದ್ಧ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಪ್ರದಾನ ಎ.26 ರಂದು ಉಪ್ಪಿನಂಗಡಿಯ ಪಾತಾಳದ ದುರ್ಗಾಗಿರಿ ಭಜನ ಮಂದಿರದಲ್ಲಿ ಸುಂಕದಕಟ್ಟೆ ಮೇಳದ ವೇದಿಕೆಯಲ್ಲಿ ನಡೆಯಲಿದೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ.

91ರ ಹರಯದ ಪಾತಾಳ ವೆಂಕಟರಮಣ ಭಟ್ಟರು ಕಾಂಚನ ಮೇಳ, ಸೌಕೂರು ಮೇಳ, ಮೂಲ್ಕಿ ಮೇಳ, ದೀರ್ಘಕಾಲದ ತಿರುಗಾಟ ಧರ್ಮಸ್ಥಳ ಮೇಳದಲ್ಲಿ ನಡೆಸಿದ್ದಾರೆ. ಸ್ತ್ರೀವೇಷಕ್ಕೆ ಪುರುಷವೇಷಕ್ಕೆ ಸಮದಂಡಿಯಾಗುವಂತೆ ಬೇಲೂರು ಶಿಲಾಬಾಲಿಕೆಯರ ಅಂಗಭಂಗಿಗಳನ್ನು ಸ್ವತಃ ಪರಿಶೀಲಿಸಿ ಅಧ್ಯಯನ ಮಾಡಿ ಯಕ್ಷಗಾನ ಸ್ತ್ರೀವೇಷದ ಆಹಾರ್ಯವನ್ನು ನೃತ್ಯವಿನ್ಯಾಸಕ್ಕೆ ಬೇಕಾದಂತೆ ಸಿದ್ಧಪಡಿಸಿದ ಅವರು ಸೌಂದರ್ಯ ಪ್ರಧಾನ ಸ್ತ್ರೀವೇಷದ ಬಣ್ಣಗಾರಿಕೆಯಲ್ಲೂ ಹೊಸತನದ ಆವಿಷ್ಕಾರ ತಂದಿದ್ದರು. ಮಾಯಾ ಮೋಹಿನಿ, ಮಾಯಾ ಪೂತನಿ, ಮಾಯಾ ಅಜಮುಖಿ ಮೊದಲಾದ ಮಾಯಾ ಸ್ತ್ರಿವೇಷದ ಪಾತ್ರಗಳಿಗೆ ವಿಶಿಷ್ಟ ಕಲ್ಪನೆ ನೀಡಿ ಇತರ ಸ್ತ್ರೀವೇಷಗಳಿಗಿಂತ ಭಿನ್ನ ಎಂದು ನಿರೂಪಿಸಿದ್ದರು. ಗರತಿ ಪಾತ್ರಗಳಲ್ಲಿ ಸೈ ಎನಿಸಿದ್ದರು.

ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮುದೇವಿ ಮೊದಲಾದ ಪಾತ್ರಗಳಲ್ಲಿ ಹೆಸರು ಗಳಿಸಿದ್ದರು. ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ಸುಭದ್ರೆ, ದ್ರೌಪದಿ, ಸ್ವಯಂಪ್ರಭೆಯಂತಹ ಪಾತ್ರಗಳಲ್ಲಿ ಪರಕಾಯ ಪ್ರವೇಶದಿಂದ ಪ್ರೇಕ್ಷಕರನ್ನು ಬೆರಗಾಗಿಸಿದವರು. ಮಾಸ್ಟರ್ ವಿಠಲ ಅವರ ಶಿಷ್ಯನಾಗಿ ಭರತನಾಟ್ಯ, ಶಿವತಾಂಡವ, ಭಸ್ಮಾಸುರ ಮೋಹಿನಿಯ ನೃತ್ಯಗಳ ಪದಗತಿಯ ಅಭ್ಯಾಸ ಮಾಡಿದ್ದರು. ಮಂಕುಡೆ ಸಂಜೀವ, ಕೋಳ್ಯೂರು ರಾಮಚಂದ್ರ ರಾವ್, ಕರ್ಗಲ್ಲು ಸುಬ್ಬಣ್ಣ ಭಟ್ ಮೊದಲಾದವರ ಸಾಲಿನಲ್ಲಿ ಗುರುತಿಸಿಕೊಂಡವರು. ಯಕ್ಷಗಾನದಿಂದ ದೊರೆತ ಆರ್ಥಿಕ ಸಂಪಾದನೆಯನ್ನು ಈವರೆಗೆ 50 ಮಂದಿ ಕಲಾವಿದರಿಗೆ ತಲಾ 10 ಸಾವಿರ ರೂ.ಗಳಂತೆ ನೀಡಿ ಸಮ್ಮಾನಿಸಿದವರು.

Related posts

ದಿ‌.ಎನ್ ಪದ್ಮನಾಭ ಮಾಣಿಂಜರಿಗೆ ಶ್ರೀ ಗುರುದೇವ ಸಹಕಾರಿ ಸಂಘದಿಂದ ನುಡಿನಮನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ. ಸಾಹಿತ್ಯ ಸಮ್ಮೇಳನ : ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ 92ನೇ ಅಧಿವೇಶನ ಉದ್ಘಾಟಿಸಿದ ಶತಾವಧಾನಿ ಡಾ.ರಾ.ಗಣೇಶ್

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ: ಇವಿಎಂ ಮಾದರಿ ಆ್ಯಪ್ ಬಳಸಿ ಮತ ಚಲಾವಣೆ

Suddi Udaya

ಮಚ್ಚಿನ ಪ್ರೌಢಶಾಲೆಗೆ ಕ್ರೀಡಾ ಸಾಮಾಗ್ರಿಗಳ ವಿತರಣೆ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ವಿವಿಧ ಕ್ರೀಡಾಕೂಟಗಳು

Suddi Udaya

ಶಿರ್ಲಾಲಿನಲ್ಲಿ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ಮುಂಡಾಜೆ ಮಾಲತಿ ಪ್ರಭು ನಿಧನ

Suddi Udaya
error: Content is protected !!