ಬೆಳ್ತಂಗಡಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಭ್ರಷ್ಟಾಚಾರ ರಹಿತ ಪರಿಶುದ್ಧ, ಪರಿಶುಭ್ರ ಪಾರದರ್ಶಕ ಆಡಳಿತ ಈ ದೇಶಕ್ಕೆ ನೀಡಿದೆ. ದೇಶದೆಲ್ಲೆಡೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಲ್ಲೂ ಮೋದಿ ಹವಾ ಗೋಚರಿಸುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಜಿಲ್ಲೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಾದ ಅಭಿವೃದ್ಧಿಯೂ ಸೇರಿಕೊಂಡಿರುವುದರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಅಭೂತಪೂರ್ವವಾಗಿ ಜಯಭೇರಿ ಭಾರಿಸಲಿದ್ದಾರೆಂಬ ವಿಶ್ವಾಸವನ್ನು ಮಾಜಿ ಶಾಸಕ ಪ್ರಭಾಕರ ಬಂಗೇರ ವ್ಯಕ್ತ ಪಡಿಸಿದ್ದಾರೆ.
ಅವರು ಎ.24ರಂದು ನಡೆದ ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನರೇಂದ್ರ ಮೋದಿ ಮುತ್ಸದಿತನದಿಂದ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಂತಿವೆ. ಶತ್ರುರಾಷ್ಟ್ರಗಳು ಆರ್ಥಿಕ ಪತನ ಹೊಂದಿದೆ. ವಿದೇಶಾಂಗ ನೀತಿಯಿಂದ ವಿಶ್ವದೆಲ್ಲೆಡೆ ಭಾರತದ ಗೌರವ ಹೆಚ್ಚಾಗಿ ಭಾರತ ವಿಶ್ವಗುರುವಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ನಮ್ಮ ಜಿಲ್ಲೆಯಲ್ಲಿ ನಳೀನ್ ಕುಮಾರ್ ಕಟೀಲು ಮುಖಾಂತರ ಕೇಂದ್ರ ಸರ್ಕಾರದ ಯೋಜನೆಗಳಿಂದ ಮೂಲ ಸೌಕರ್ಯ ವೃದ್ಧಿಯಾಗಿದೆ. ಜಿಲ್ಲೆಯನ್ನು ಸಂಪರ್ಕಿಸುವ ವಿವಿಧ ರಸ್ತೆಗಳು ಮೇಲ್ದರ್ಜೆಗೇರಿದೆ. ಯುವ ಜನತೆಗೆ ಉದ್ಯೋಗವಕಾಶ ಹೇರಳವಾಗಿ ದೊರಕಿದ್ದು, ಸಂಸದರು ದೊರಕಿಸಿದ ಸಿ.ಆರ್ ಪಂಡ್‌ನಿಂದಾಗಿ ಆರೋಗ್ಯ ಕ್ಷೇತ್ರಗಳಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಇವುಗಳ ಫಲಶೃತಿ ನಮ್ಮ ಕಣ್ಣೆದುರು ಗೋಚರಿಸುತ್ತದೆ. ಜಿಲ್ಲೆಯ ಅಸಂಖ್ಯಾತ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಫಸಲು ಭೀಮಾ ಯೋಜನೆ ಮಧ್ಯಮವರ್ಗ ಜನತೆ ಆಯುಷ್ಮಾನ್ ಯೋಜನೆ ಉಜ್ವಲ ಗ್ಯಾಸ್, ಮುದ್ರಾಯೋಜನೆ ಫಲಾನುಭವಿಗಳಾಗಿ ಕೇಂದ್ರ ಸರ್ಕಾರದ ನೆರವು ಪಡೆದುಕೊಂಡಿದ್ದು, ಈ ಎಲ್ಲಾ ಫಲಾನುಭವಿಗಳು, ನರೇಂದ್ರ ಮೋದಿಯವರಿಗೆ ಕೃತಜ್ಞತೆಯ ರೂಪದಲ್ಲಿ ಬಹುಮತದ ಉಡುಗೊರೆಯನ್ನೇ ನೀಡಲಿದ್ದಾರೆ. ದೇಶದ ಗಡಿ ರಕ್ಷಣೆ ಮಾಡಿದ ಯೋಧ ಕ್ಯಾಪ್ಟನ್ ಬ್ರಿಜೇಶ್ ಚೌಟ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವುದು ಜಿಲ್ಲೆಯ ಎಲ್ಲಾ ವರ್ಗದ ಜನತೆಯಲ್ಲಿ ಇಮ್ಮಡಿ ಉತ್ಸಾಹ ತರಿಸಿದೆ. ಸೈನ್ಯದ ಮನೋಬಲ ಹೆಚ್ಚಿಸಿದ ಭಾರತದ ಕ್ಯಾಪ್ಟನ್ ನರೇಂದ್ರ ಮೋದಿಗೆ ಜಿಲ್ಲೆಯ ಜನತೆ ಸೇನೆಯ ಕ್ಯಾಪ್ಟನ್ ಆಗಿದ್ದ ಬ್ರಿಜೇಶ್ ಚೌಟರನ್ನು ಭಾರಿ ಅಂತರದಿಂದ ಚುನಾಯಿಸುತ್ತಾರೆ. ದೇಶದ ಜನತೆ ಬಿಜೆಪಿಯನ್ನು 400 ಗಡಿ ದಾಟಿಸುತ್ತಾರೆಂಬ ವಿಶ್ವಾಸವನ್ನು ಪ್ರಭಾಕರ ಬಂಗೇರ ಪತ್ರಿಕಾಗೋಷ್ಠಿ ಮೂಲಕ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಬಿಜೆಪಿ ಪ್ರದಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ., ಕಾರ್ಯಾಲಯ ಕಾರ್ಯದರ್ಶಿ ಜಯಾನಂದ ಕಲ್ಲಾಪು ಉಪಸ್ಥಿತರಿದ್ದರು.
ಕಾರ್ಯಾಲಯ ಪ್ರಮುಖ ರಾಜೇಶ್ ಪೆಂರ್ಬುಡ ಸ್ವಾಗತಿಸಿ, ಧನ್ಯವಾದವಿತ್ತರು.