ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ: ಹೊಸ ದಾಖಲೆ ನಿರ್ಮಿಸಿದ ಬಾಂಜಾರುಮಲೆಯ ಮತದಾರರು

Suddi Udaya

ಬೆಳ್ತಂಗಡಿ: ನೆರಿಯ ಗ್ರಾಮದ ಅತ್ಯಂತ ದುರ್ಗಮ ಪ್ರದೇಶವಾದ ಬಾಂಜಾರು ಮಲೆ ಮತಗಟ್ಟೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ 100 ಮತದಾನವಾದ ದಾಖಲೆ ನಿರ್ಮಾಣವಾಗಿದೆ.

ಬಾಂಜಾರುಮಲೆ ಮತಗಟ್ಟೆ ಸಂಖ್ಯೆ 86ರಲ್ಲಿ 111 ಮಂದಿ ಮತದಾರರಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಇಲ್ಲಿ 51 ಮಂದಿ ಪುರುಷರು ಮತ್ತು 60 ಮಂದಿ ಮಹಿಳಾ ಮತದಾರರು ಇದ್ದು, ಎಲ್ಲರೂ ಮತ ಚಲಾಯಿಸಿದ್ದಾರೆ.


ತಾಲೂಕು ಕೇಂದ್ರದಿಂದ 45 ಕಿಮೀ. ದೂರ. ಚಾರ್ಮಾಡಿ ಘಾಟಿ ಮೂಲಕ ಸಂಚರಿಸಿ 9ನೇ ತಿರುವಿನ ಸಮೀಪ ಬಲಕ್ಕೆ ತಿರುಗಿ ಅಲ್ಲಿಂದ 7ಕಿಮೀ ಕ್ರಮಿಸಿ ಸಮುದಾಯ ಭವನದಲ್ಲಿ ಈ ಮತಗಟ್ಟೆ ಇದೆ.

2019ರ ಲೋಕಸಭೆ ಚುನಾವಣೆಯಲ್ಲಿ 106 ಮತದಾರರಿದ್ದು ಓರ್ವ ಮಾತ್ರ ಮತ ಚಲಾಯಿಸದ ಕಾರಣ 99.06 ಪ್ರಮಾಣದ ಮತದಾನ ದಾಖಲಾಗಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿತ್ತು.

ಇತ್ತೀಚೆಗೆ ಬಾಂಜಾರು ಮಲೆ ಸಮುದಾಯ ಭವನ ಮತಗಟ್ಟೆ 86ಕ್ಕೆ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ। ಆನಂದ್ ಕೆ. ಎ.17ರಂದು ಭೇಟಿ ನೀಡಿ ಮತದಾರರೊಂದಿಗೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಲೋಕೇಶ್, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾದ ವೈಜಣ್ಣ ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ದ.ಕ. ಸ್ವೀಪ್ ಸಮಿತಿ ಎಸ್ಎಲ್‌ಎಂಟಿ ಪ್ರಮೀಳಾ ರಾವ್, ತಾಪಂ ವ್ಯವಸ್ಥಾಪಕ ಪ್ರಶಾಂತ್ ಡಿ., ಜಿಲ್ಲಾ ಸ್ವೀಪ್ ಸಮಿತಿಯ ಡಿಎಲ್‌ಎಂಟಿ ಯೋಗೇಶ ಎಚ್.ಆರ್., ನೆರಿಯ ಗ್ರಾಪಂ ಪಿಡಿಒ ಸುಮಾ, ಬಿಎಲ್‌ ಮಧುಮಾಲಾ ಮೊದಲಾದವರು ಉಪಸ್ಥಿತರಿದ್ದರು

ತಾಲೂಕು ಸ್ವೀಪ್ ಸಮಿತಿ ವತಿಯಿಂದ ಊರವರೊಂದಿಗೆ ಸಭೆ ನಡೆಸಿ ಪೋಸ್ಟರ್ ಅಭಿಯಾನ ನಡೆಸಲಾಗಿತ್ತು. ಜತೆಗೆ ವಿಶೇಷ ಮತ್ತು ಅನನ್ಯ ಮತಗಟ್ಟೆ ಎಂದು ಪರಿಗಣಿಸಿ ಮತದಾರರಿಗೆ ಅರಿವು ಮೂಡಿಸಲಾಗಿತ್ತು. ಇದರಿಂದ ಪ್ರೇರಿತರಾದ ಮತದಾರರು ತಾವಾಗಿಯೇ ಈ ಬಾರಿ ಶೇ. 100 ಮತದಾನದ ಭರವಸೆ ನೀಡಿದ್ದರು.

ಯಾವುದೇ ಮೂಲಭೂತ ಸವಲತ್ತು ಮರೀಚಿಕೆಯಾಗಿರುವ ನೆರಿಯ ಗ್ರಾಮದ ಬಾಂಜಾರುಮಲೆ ಜನತೆ ಸ್ವಯಂಪ್ರೇರಿತರಾಗಿ ಶೇ. 100 ಮತದಾನ ಮಾಡಿ ಹೊಸ ದಾಖಲೆ ನಿಮಿ೯ಸಿದ್ದಾರೆ.

Leave a Comment

error: Content is protected !!