ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ( ಡಿ .ಇಎಲ್. ಇಡಿ) ಸಂಸ್ಥೆಯಲ್ಲಿ ಕಾಲೇಜು ವಾರ್ಷಿಕೋತ್ಸವ

Suddi Udaya

ಉಜಿರೆ: ನಾವು ಸದಾ ಸಕಾರಾತ್ಮಕವಾಗಿ ಚಿಂತಿಸಬೇಕು. ನಾವು ಉತ್ತಮವಾಗಿದ್ದರೆ ಇಡೀ ಸಮಾಜವೇ ನಮಗೆ ಅತ್ಯುತ್ತಮವಾಗಿ ಕಾಣುತ್ತದೆ ಹಾಗೆ ಜೀವನದಲ್ಲಿ ಸೋಲು, ಅವಮಾನದ ಕಹಿಯನ್ನು ಅನುಭವಿಸಿದಾಗಲೇ ಜೀವನದಲ್ಲಿ ಯಶಸ್ಸು ಎಂಬ ಸಿಹಿಯನ್ನು ಸವಿಯಲು ಸಾಧ್ಯವಾಗುತ್ತದೆ. ನಾವು ನಡೆಯುವ ದಾರಿಯಲ್ಲಿ ಅನೇಕ ತರಹದ ಮುಳ್ಳುಗಳಿರುವುದು ಸಹಜ ಅವುಗಳನ್ನು ಮೆಟ್ಟಿ ಮುಂದೆ ಸಾಗಿದರೆ ಮಾತ್ರ ಜೀವನದ ಗುರಿಯನ್ನು ತಲುಪಲು ಸಾಧ್ಯ. ಅರಿಷಡ್ವರ್ಗಗಳನ್ನು ದೂರವಿಟ್ಟು ಸರ್ವರನ್ನು ಸೌಹಾರ್ದತೆಯಿಂದ ಕಂಡು ಸದಾ ಪ್ರೀತಿ ಹಂಚುವವರು ನಾವಾಗಿರಬೇಕು. ಹಾಗಾಗಿ ಭಾವಿ ಶಿಕ್ಷಕರಾಗುವ ನೀವುಗಳು ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸಿಕೊಂಡು ಸಹಬಾಳ್ವೆಯಿಂದ ಎಲ್ಲರೊಳಗೊಂದಾಗಿ ಬಾಳಬೇಕಾಗಿದೆ ಎಂದು ಬೆಳ್ತಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಜೈನ್ ರವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ( ಡಿ .ಇಎಲ್. ಇಡಿ) ಸಂಸ್ಥೆಯಲ್ಲಿ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ವಹಿಸಿ ಮಾತನಾಡುತ್ತಾ ನಮ್ಮ ದೇಶವು ಅಭಿವೃದ್ಧಿ ಪಥದತ್ತ ಸಾಗಲು ಮುಖ್ಯ ಕಾರಣ ಶಿಕ್ಷಣ. ಅಂತಹ ಮೌಲ್ಯಯುತ ಶಿಕ್ಷಣ ನೀಡುವ ಶಿಕ್ಷಕರು ಈ ಸಂಸ್ಥೆಯಿಂದ ಪ್ರತಿ ವರ್ಷ ಹೊರಹೊಮ್ಮುತ್ತಾರೆ ಇದು ಹೆಮ್ಮೆಯ ವಿಷಯ ಹಾಗಾಗಿ ಸದಾ ಕ್ರಿಯಾಶೀಲರಾಗಿ ಚಿಂತಿಸಿ ನಿಮಗಾಗಿ ಸದಾ ಅವಕಾಶಗಳು ತೆರೆದಿರುತ್ತದೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾಲೇಜು ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಕುಮಾರ್ ಜೈನ್ ಅವರ ಶೈಕ್ಷಣಿಕ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಸಂಸ್ಥೆ ವತಿಯಿಂದ ಫಲಪುಷ್ಪ ನೀಡಿ ಗೌರವಿಸಲಾಯಿತು.

2022-23ನೇ ಸಾಲಿನಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಸ್ವಾಮಿ ಕೆ.ಎ. ಸ್ವಾಗತಿಸಿ ,ಉಪನ್ಯಾಸಕ ಮಂಜು ಆರ್. ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ಶ್ರೀಮತಿ ಅನುಷಾ ಡಿ.ಜೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದ ವಿಜೇತರ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು. ದಿವ್ಯ ಮತ್ತು ಪ್ರತೀಕ್ಷ ಪ್ರಾರ್ಥಿಸಿ, ನಿಶಾ ವಂದಿಸಿ, ರಾಬಿಯ ಮತ್ತು ರಾಯೀಝ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Comment

error: Content is protected !!