ಬೆಳ್ತಂಗಡಿ: ಕಾರಿನಲ್ಲಿ ಮಲಗಿದ್ದವರ ಮೇಲೆ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಸಂಶುದ್ದೀನ್ ಎಂಬುವವರು ಕಳೆದ ಮೇ 3ರಂದು ರಾತ್ರಿ ತನ್ನ ಕಾರಿನಲ್ಲಿ ಅನಾಸ್ ಎಂಬವರೊಂದಿಗೆ ಮೂಡಿಗೆರೆ ಪಟ್ಟಣದ ಹ್ಯಾಂಡ್‌ಪೋಸ್ಟ್‌ಗೆ ಬಾಳೆಕಾಯಿ ಖರೀದಿಗೆ ತೆರಳಿದ್ದರು. ಮಾರ್ಗಮಧ್ಯೆ ಕೊಟ್ಟಿಗೆಹಾರದಲ್ಲಿ ಕಾರು ಚಾಲಕ ಸಂಶುದ್ದೀನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕಾರನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಲು ಕಾರಿನಲ್ಲೇ ಮಲಗಿದ್ದರು. ಮಧ್ಯರಾತ್ರಿ ಕಾರಿನ ಬಳಿಗೆ 4 ಬೈಕ್‌ಗಳಲ್ಲಿ ಬಂದ 8 ಮಂದಿ ಯುವಕರ ಗುಂಪು ದಿಢೀರ್ ಕಾರಿನ ಮೇಲೆ ದಾಳಿ ಮಾಡಿ ಬಾಟಲಿ, ಕಲ್ಲು, ರಾಡ್‌ಗಳಿಂದ ಕಾರಿನ ಗ್ಲಾಸ್ ಒಡೆದು ಹಾಕಿದ್ದಲ್ಲದೇ ಕಾರಿನೊಳಗಿದ್ದ ಸಂಶುದ್ದೀನ್ ಹಾಗೂ ಅನಾಸ್ ಅವರಿಗೆ ಹಲ್ಲೆ ಮಾಡಿದ್ದಾರೆ.
ಈ ವೇಳೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ ರೂ. 48 ಸಾವಿರ ಹಣವನ್ನು ತೆಗೆದುಕೊಂಡು, ಕೊಲ್ಲುವ ಬೆದರಿಕೆಯನ್ನೂ ಹಾಕಿ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಸಂಶುದ್ದೀನ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ದುಷ್ಕರ್ಮಿಗಳು ರಾಡ್ ಬೀಸಿದ್ದರಿಂದ ಸಂಶುದ್ದೀನ್ ಅವರ ಮೂಗು, ತಲೆಗೆ ಪೆಟ್ಟಾಗಿದೆ. ಹಲ್ಲೆಯಿಂದ ಸಂಶುದ್ದೀನ್ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡ ಯುವಕರ ಗುಂಪು ಅಲ್ಲಿಂದ ಪರಾರಿಯಾಗಿದೆ. ನಂತರ ಅನಾಸ್ ಅವರು ಸಂಶುದ್ದೀನ್ ಅವರನ್ನು ಬಣಕಲ್‌ನ ಸಾಯಿ ಕೃಷ್ಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬೇರೆ ವಾಹನದಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ದಾಖಲಿಸಿದ್ದಾರೆ. ಮೇ 7 ರಂದು ಬಣಕಲ್ ಪೊಲೀಸರು ಮಂಗಳೂರಿಗೆ ತೆರಳಿ ಹಲ್ಲೆಗೊಳಗಾದ ಸಂಶುದ್ದೀನ್ ಅವರಿಂದ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ವಿನಾಕಾರಣ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಸಂಶುದ್ದೀನ್ ಪೊಲೀಸರಿಗೆ ನೀಡಿದ ದೂರಿನ ಮೂಲಕ ತಿಳಿಸಿದ್ದಾರೆ.