ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದ ತೆಕ್ಕಾರಿನ ಶ್ರೀಗೋಪಾಲಕೃಷ್ಣ ದೇವರಿಗೆ ನೂರೈವತ್ತು ವರ್ಷಗಳ ನಂತರ ಬಾಲಾಲಯದಲ್ಲಿ ಪ್ರಥಮ ಪೂಜೆ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೂರೈವತ್ತು ವರ್ಷಗಳ ನಂತರ ಬಾಲಾಲಯದಲ್ಲಿ ಪ್ರಥಮ ಪೂಜೆಯನ್ನು ಮೇ 11 ರಂದು ನಡೆಸಲಾಯಿತು.

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕಾಲಚಕ್ರದಲ್ಲಿ ಅನ್ಯ ಧರ್ಮದವರ ವಶದಲ್ಲಿದ್ದ ಪರಿಣಾಮವಾಗಿ ದೇವಸ್ಥಾನದ ಕುರುಹುಗಳು ನಾಶವಾಗಿತ್ತು. ಅಲ್ಲಿ ಅಡಿಕೆ ಕೃಷಿಮಾಡಿ ಅತಿಕ್ರಮಣ ಮಾಡಲಾಗಿತ್ತು, ಹಿರಿಯರು ಆ ಸ್ಥಳದಲ್ಲಿ ಶ್ರೀಕೃಷ್ಣ ದೇವರ ಸಾನಿಧ್ಯವಿದ್ದ ಜಾಗದಲ್ಲೇ ಮತ್ತೆ ದೇಗುಲ ನಿರ್ಮಾಣ ಮಾಡಲು ಪ್ರಯತ್ನಿಸಿ ದೇವಸ್ಥಾನದ ಜಮೀನು ಪಡೆಯಲು ನಿರಂತರ ಪ್ರಯತ್ನ ಹಿಂದೂ ಸಂಘಟನೆಯ ಜೊತೆಗೂಡಿ ಮಾಡಲಾಗಿತ್ತು ,ದೇವಸ್ಥಾನದ ಪುನರುತ್ಥಾನಕ್ಕೆ ಕಳೆದ ವರ್ಷವೇ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ದೇವರ ಕಟ್ಟೆ ನಿರ್ಮಿಸಿ ಭಜನೆ ನಡೆಸಲಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಬಳಿಕ ನಡೆದ ಪ್ರಶ್ನಾ ಚಿಂತನೆಯಲ್ಲಿ ಗೋಪಾಲಕೃಷ್ಣ ದೇವರ ಸಾನಿಧ್ಯ ಇರುವುದಕ್ಕೆ ಪುಷ್ಠಿ ದೊರತಿತ್ತು ಮತ್ತು ಸ್ಥಳದಲ್ಲಿ ಉತ್ಖನನ ನಡೆಸಿದರೆ ಶ್ರೀದೇವರಿಗೆ ಸಂಬಂಧಿಸಿದ ಪರಿಕರಗಳು ಲಭ್ಯವಾಗುವ ಕುರಿತು ಮಾಹಿತಿ ತಿಳಿದುಬಂದಿತ್ತು. ನಂತರ ದೇವಳದ ಜಾಗಕ್ಕೆ ಸಂಬಂಧಿಸಿದ ಅಡಿಕೆ ತೋಟದಲ್ಲಿ ಮಣ್ಣಿಂದ ಆವರಿಸಿದ ಬಾವಿಯಲ್ಲಿ ಶ್ರೀ ದೇವರ ಭಗ್ನಗೊಂಡ ಮೂರ್ತಿ ದೇವರಿಗೆ ಸಂಬಂಧಪಟ್ಟ ಪರಿಕರಗಳು ದೊರಕಿತ್ತು.


ನಂತರ ದೇವಸ್ಥಾನ ನಿರ್ಮಾಣಕ್ಕೆ ಅವಶ್ಯಕತೆಯ ಜಮೀನು ಒಟ್ಟು ಮಾಡುವ ಕಾರ್ಯವನ್ನು ಮಾಡಲಾಯಿತು. ನಂತರ ಏ. 22 ರಂದು ದೇವಸ್ಥಾನವಿದ್ದ ಭಟ್ರಬೈಲು ಜಮೀನಿನಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಗಣ್ಯರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿಸಿದರು. ಇಂದು ಮುಂಜಾನೆಯ ಶುಭ ಘಳಿಗೆಯಲ್ಲಿ ತೆಕ್ಕಾರು ಆಸುಪಾಸಿನ ಹಿಂದೂ ಬಾಂಧವರ ಉಪಸ್ಥಿತಿಯಲ್ಲಿ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿ ಉಪಸ್ಥಿತಿಯಲ್ಲಿ ಉತ್ಖನನದ ವೇಳೆ ಸಿಕ್ಕಿದ ಅದೇ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹವನ್ನು ಬಾಲಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.

Leave a Comment

error: Content is protected !!