ಬಂಗೇರರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸೋಣ……

Suddi Udaya

ನಾನು ವಸಂತ ಬಂಗೇರರನ್ನು ತೀರ ಹತ್ತಿರದಿಂದ ಬಲ್ಲವನಲ್ಲ , ಆದರೆ ಇಡೀ ರಾಜ್ಯಾದ್ಯಂತ ರಾಜಕೀಯದಲ್ಲಿ ಸೈ ಎನಿಸಿಕೊಂಡ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಬಂಗೇರರು ಒಬ್ಬರು. ನಾನು ಎಡಪಂಥೀಯ ಸಂಘಟನೆಗಳಲ್ಲಿ ಸಕ್ರೀಯವಾಗಿ ಸಾಮಾನ್ಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುತ್ತಾಡಿದ್ದೇನೆ. ಈ ಸಂದರ್ಭದಲ್ಲಿ ನನಗೆ ಮಾತಿಗೆ ಸಿಕ್ಕಿದ ವಿವಿಧ ಪಕ್ಷಗಳ ಶಾಸಕರು , ರಾಜಕಾರಣಿಗಳು ಮಾತಿನ ಸಂದರ್ಭದಲ್ಲಿ ಬೆಳ್ತಂಗಡಿ ಎಂದಾಕ್ಷಣ “ಓ , ವಸಂತ ಬಂಗೇರರ ಊರಿನವರು ತಾನೆ ?” ಎಂದು ಕೇಳುವುದು ಮಾಮೂಲು. ಈ ಕಾರಣದಿಂದಾಗಿ ನಾನು ಕಂಡAತೆ ಬಂಗೇರರ ಬಗ್ಗೆ ಒಂದೆರಡು ಮಾತು ಬರೆಯಲೆಬೇಕು ಎಂದು ಬರೆಯುತ್ತಿದ್ದೇನೆ.
“ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆಯುವ ಯಾವುದೇ ರೀತಿಯ ಧಾಳಿ , ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ ಆಗ ನೀನು ನನ್ನ ಸಂಗಾತಿ” ಎಂಬ ಕ್ಯೂಬಾದ ಕ್ರಾಂತಿಕಾರಿ ಚೇ ಗವೇರಾ ಅವರ ಮಾತು ವಸಂತ ಬಂಗೇರರಿಗೆ ಹೇಳಿ ಮಾಡಿಸಿದಂತಿದೆ. ಯಾವಾಗ ಯಾರಿಗೂ ದೌರ್ಜನ್ಯ, ಹಿಂಸೆಯಾದರೆ ಸದಾ ಸಿಡಿದೇಳುವ ಅವರ ಮನೋಭಾವ ಜನರನ್ನು ಮತ್ತಷ್ಟು ಹತ್ತಿರಕ್ಕೆ ಅಯಸ್ಕಾಂತದಂತೆ ಸೆಳೆಯುತ್ತಿದೆ. ಬಂಗೇರರ ಬಳಿ ಸಹಾಯಕ್ಕಾಗಿ ಕಾಂಗ್ರೇಸ್, ಬಿಜೆಪಿ, ಜೆಡಿಎಸ್, ಕಮ್ಯೂನಿಸ್ಟ್, ಸೇರಿದಂತೆ ಯಾರೇ ಬರಲಿ, ನಿನ್ನ ಪಕ್ಷ ಯಾವುದೆಂದು ಕೇಳದೆ ಎಲ್ಲರಿಗೂ ಒಂದೇ ರೀತಿಯ ನ್ಯಾಯ ಒದಗಿಸುವ ವಿಶೇಷ ಗುಣ ಅವರನ್ನು ರಾಜಕೀಯ ಮುತ್ಸದಿಯಾಗಿ ಬೆಳೆಸಿದೆ ಎಂಬ ಅಭಿಪ್ರಾಯ ನನ್ನದು.

ನಾನು ಮೊದಲೇ ಹೇಳಿದಂತೆ ಓರ್ವ ಎಡಪಂಥೀಯ ಚಳವಳಿಯಲ್ಲಿ ಗುರುತಿಸಿಕೊಂಡವ. ಆದರೆ ದಲಿತ, ಆದಿವಾಸಿ ಸಮುದಾಯದ ಮಧ್ಯೆ ನಿರಂತರ ಸಂಪರ್ಕ ಹೊಂದಿ, ಅವರ ಪರವಾಗಿ ಹೋರಾಟ ನಡೆಸುತ್ತಿದ್ದೇನೆ. ಹಲವಾರು ಬಾರಿ ನಾನು ಆದಿವಾಸಿಗಳ ಸಮಸ್ಯೆಗಳನ್ನು ಬಂಗೇರರ ಬಳಿ ಹೇಳಿಕೊಂಡ ಸಂದರ್ಭದಲ್ಲಿ ವಿಶೇಷ ಗಮನ ಹರಿಸುತ್ತಿದ್ದರು. ಯಾರೇ ಧಮನಿತರು ತನ್ನ ಬಳಿ ಬಂದಾಗಲೂ ಅವರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದರು. ಅಭಿವೃದ್ಧಿ ವಿಚಾರದಲ್ಲಿಯೂ ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಿದವರಲ್ಲ. ಒಂದೊಮ್ಮೆ ಬೂದು ಪ್ರದೇಶವಾಗಿದ್ದ ಬೆಳ್ತಂಗಡಿ ತಾಲೂಕು ಇಂದು ಅಭಿವೃದ್ಧಿ ಹೊಂದಿದ್ದರೆ ಅದರ 75% ಪ್ರತಿಫಲ ಬಂಗೇರರಿಗೆ ಸಲ್ಲಲೇಬೇಕು. ಆಡು ತಿನ್ನದ ಸೊಪ್ಪಿಲ್ಲ, ಬಂಗೇರರು ಮಾಡದ ಅಭಿವೃದ್ಧಿ ಇಲ್ಲ ಎಂದರೆ ತಪ್ಪಗಲಾರದು.

ಆದಿವಾಸಿ ಸಮುದಾಯದ ಅಭಿವೃದ್ಧಿ 9೦ರ ದಶಕದಲ್ಲಿ ಜೀತ ಮುಕ್ತ ಕಾಲನಿಯಾದ ಕೋಲೋಡಿ ಮಲೆಕುಡಿಯ ಕಾಲನಿ ಇಂದು ಯಾವುದೇ ಸ್ಮಾರ್ಟ್ ಸಿಟಿಯ ರಸ್ತೆಗೂ ಕಮ್ಮಿಯಿಲ್ಲ. ಒಂದೇ ಆದಿವಾಸಿ ಕಾಲನಿಗೆ ಒಂದೇ ಯೋಜನೆಯಡಿ 16.50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಂಕ್ರೀಟ್ ರಸೆ ನಿರ್ಮಾಣ ಕಾರ್ಯವಾಗಿರುವುದು ಇಡೀ ದೇಶದಲ್ಲೇ ಪ್ರಥಮ. ಇಲ್ಲಿನ 76 ಮನೆಗಳಿಗೆ ಬೆಳಕು ನೀಡಿದ ಕೀರ್ತಿ ಕೂಡ ಬಂಗೇರರಿಗೆ ಸಲ್ಲುತ್ತದೆ. ಬಾಂಜಾರು ಮಲೆಕುಡಿಯ ಕಾಲನಿ ದಶಕದ ಹಿಂದೆ ಕತ್ತಲ ಲೋಕ ಎಂದರೆ ತಪ್ಪಾಗಲಾರದು ಆದರೆ ಈಗ ಸುಮಾರು 3.50 ಕೋಟಿ ವೆಚ್ಚದಲ್ಲಿ ರಸ್

ಕಾಂಕ್ರೀಟಿಕರಣವಾಗಿದೆ. 1.20 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಂಬಟೆ ಮಲೆಕುಡಿಯ ಕಾಲನಿ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದೆ. ಇದು ಕೇವಲ ನೆರಿಯ ಗ್ರಾಮದ ಉದಾಹರಣೆ ಮಾತ್ರ. ತಾಲೂಕಿನ ಸಾಮಾನ್ಯ ಎಲ್ಲಾ ಆದಿವಾಸಿ ಸಮುದಾಯದ ಕಾಲನಿಗಳ ಅಭಿವೃದ್ಧಿಯಲ್ಲಿ ಬಂಗೇರರ ಪಾಲು ಪ್ರಮುಖವಾದುದು . ಮಾಜಿ ಶಾಸಕರಾದರೂ ಬಾಂಜಾರು ಮಲೆಕುಡಿಯ ಕಾಲನಿಯ ಜಮೀನಿನ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಸಹಾಯ, ಸಹಕಾರ ನೀಡುತ್ತಿರುವ ಬಂಗೇರರು ಆದಿವಾಸಿಗಳ ಪಾಲಿಗೆ ಸಂಜೀವಿನಿ.
ರಾಜ್ಯದ ರಾಜಕಾರಣಿಗಳಲ್ಲಿ ನೇರ ನಡೆನುಡಿಯ ರಾಜಕಾರಣಿ ಎಂದರೆ ತಪ್ಪಾಗಲಾರದು. ತಾನು ಜನತೆಗೆ ನೀಡುವ ಅಭಿವೃದ್ಧಿ ಭರವಸೆಯನ್ನು ಈಡೇರಿಸಲು ಹಠ ಹಿಡಿದು ಸಾಧಿಸುವ ಗುಣ ಬಂಗೇರರದು. ಬಂಗೇರರು ಹಠ ಹಿಡಿದರೆ ಆಗಲ್ಲ ಎಂಬ ಮಾತೇ ಇಲ್ಲ ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಸೈ ಬಂಗೇರರ ಅಭಿವೃದ್ಧಿ ಪರ ಕಾಲದಿ ಕೆಲಸ ಮಾಡುತ್ತದೆ ಎಂದರೆ ತಪ್ಪಾಗಲಾರದು. ಯಾವುದೇ ಒಂದು ಅರ್ಜಿ ಹಿಡಿದು ಬೆಂಗಳೂರಿಗೆ ಹೋದರೆ ಆ ಅರ್ಜಿಗೆ ಪರಿಹಾರ ಸಿಗುವ ತನಕ ಬಂಗೇರರು ಹಿಂದೆ ನೋಡಲ್ಲ. ಹಿಡಿದ ಕೆಲಸ ಆಗುವ ತನಕ ಬೆನ್ನು ಹತ್ತಿ ಸಫಲತೆ

ಕಾಣುತ್ತಾರೆ. ಅದು ಅವರ ಗುಣಗಳಲ್ಲಿ ಒಂದು.
ಮಾನವೀಯ ಮೌಲ್ಯಗಳಿಗೆ ಇನ್ನೊಂದು ಹೆಸರು ವಸಂತ ಬಂಗೇರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುವಕನೊಬ್ಬ ಬಂಗೇರರ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಿದ. ದುರಾದೃಷ್ಟವಶಾತ್ ಬಂಗೇರರು ಆ ಚುನಾವಣೆಯಲ್ಲಿ ಸೋತರು. ಸ್ವಲ್ಪ ಸಮಯದ ನಂತರ ಆ ಯುವಕನ ಮನೆಯ ಯಜಮಾನ ಯಾವುದೋ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವಿಚಾರ ತಿಳಿದೊಡನೆ ತಕ್ಷಣ ತನ್ನ ಮೊಬೈಲ್ ಕೈಗೆತ್ತಿಕೊಂಡ ಬಂಗೇರರು ಸಂಬಂಧಪಟ್ಟವರ ಜೊತೆಗೆ ಮಾತನಾಡಿ ಸೂಕ್ತ ಚಿಕಿತ್ಸೆಗಾಗಿ ಮನವಿ ಮಾಡಿದರು. ಹಣಕಾಸು ಸಮಸ್ಯೆ ಎದುರಾದಾಗ ತಾನೇ ಆ ವ್ಯವಸ್ಥೆ ಮಾಡುವುದಾಗಿ ಘೋಷಿಸಿ , ಚಿಕಿತ್ಸೆ ಮುಂದುವರಿಸಲು ವೈದ್ಯರಿಗೆ ತಿಳಿಸಿದರು. ಆ ಮನೆಯ ಯುವಕನೊಬ್ಬ ತನ್ನನ್ನು ಏಕವಚನದಲ್ಲಿ ಕೈಯಲ್ಲಾಗದವನು ಎಂದು ಬಹಿರಂಗವಾಗಿ ಟೀಕಿಸಿದರೂ ಕೂಡ ತನ್ನಲ್ಲಿರುವ ಮಾನವೀಯ ಮೌಲ್ಯಗಳನ್ನು ಕೈಗೆತ್ತಿಕೊಂಡು ಆ ಜೀವ ಉಳಿಸುವ ನಿಟ್ಟಿನಲ್ಲಿ ಸಹಾಯ, ಸಹಕಾರ ನೀಡಿದ್ದಾರೆ. ಇಂತಹ ಘಟನೆಗಳು ತಾಲೂಕಿನ ಪ್ರತಿಯೊಬ್ಬರಿಗೂ ಹೇಳಲು ಇರುವತ್ತದೆ.


ರಾಜಕೀಯ ಜೀವನದಲ್ಲಿ ಇತರರಿಗೆ ಮಾದರಿಯಾಗಿ ಗುರುತಿಸಿಕೊಂಡಿರುವ ಬಂಗೇರರ ಬಗ್ಗೆ ಎಷ್ಟೇ , ಏನೇ ಟೀಕೆ ಮಾಡಿದರೂ ಭ್ರಷ್ಟಾಚಾರ , ಹಗರಣ ರಹಿತ ಶುದ್ಧಹಸ್ತ ಎಂಬುದನ್ನು ಟೀಕಾಕಾರ ಪ್ರತಿಪಕ್ಷಗಳು ಒಪ್ಪಿಕೊಳ್ಳುತ್ತಾರೆ. ಐದು ಅವಧಿಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಬಂಗೇರರು ಶುದ್ಧಹಸ್ತರು ಆ ಕಾರಣದಿಂದಾಗಿ ತಾಲೂಕಿನ ಜನರು ಅವರನ್ನು ಪ್ರೀತಿಯಿಂದ ಅಣ್ಣ ಎಂದೇ ಕರೆಯುತ್ತಾರೆ. ಹೌದು ಬಂಗೇರರು ಎಲ್ಲಾ ಸಮುದಾಯದ ಜನರನ್ನು ಸಹೋದರಂತೆ ಕಂಡಿದ್ದಾರೆ. ಇಂತಹ ಒಂದು ಅಮೂಲ್ಯವಾದ ಮುತ್ತು ದೊರಕಿದ್ದು ಬೆಳ್ತಂಗಡಿ ತಾಲೂಕಿನ ಜನರ ಸೌಭಾಗ್ಯ.
ತನ್ನ ಜೀವನುದ್ದಕ್ಕೂ ಅತ್ಯಂತ ನಿಷ್ಠುರವಾಗಿ ಕಾಣುವ ಬಂಗೇರರ ಗುಣಸ್ವಭಾವದಲ್ಲಿ ತಾಯಿ ಮನಸ್ಸಿನ ಹೃದಯವೈಶಾಲ್ಯವೂ ಇದೆ. ಜಾತ್ಯತೀತ ತತ್ವವನ್ನು ಮೈಗೂಡಿಸಿಕೊಂಡಿರುವ ಬಂಗೇರರ ನಿಧನ ತುಳುನಾಡಿನ ಸೌಹಾರ್ದ ಬೆಳವಣಿಗೆ ಜಾತ್ಯತೀತ ಪರಂಪರೆಗೆ ಏಟು ಬಿದ್ದಂತಾಗಿದೆ. ಬಂಗೇರರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸೋಣ……

            -ಶೇಖರ್ ಲಾಯಿಲ

Leave a Comment

error: Content is protected !!