
ಬೆಳ್ತಂಗಡಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ವಿಷಯಗಳ ಕುರಿತು ಮಾಹಿತಿಯನ್ನು ಪಡೆದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಹಿಂದೆ ಶಿಕ್ಷಣ ಸಂಸ್ಥೆಗಳು ಕಡಿಮೆ ಇದ್ದು ಉತ್ತಮ ಶಿಕ್ಷಣ ಪಡೆಯಲು ತುಂಬಾ ದೂರಕ್ಕೆ ಹೋಗ ಬೇಕಾಗುತ್ತಿತ್ತು. ಆದರೆ ಈಗ ನಮಗೆ ಬೇಕಾದ ಶಿಕ್ಷಣ ಸಂಸ್ಥೆಗಳು ತುಂಬಾ ಹತ್ತಿರವಾಗಿದೆ. ಈಗ ಉದ್ಯೋಗಕ್ಕೆ ಬೇಕಾಗಿರುವುದು ಅಂಕಗಳು ಮಾತ್ರವಲ್ಲ ಹೆಚ್ಚಿನ ಜ್ಞಾನ ಮತ್ತು ಕೌಶಲ್ಯ ಅತಿ ಅಗತ್ಯ ಎಂದು ವಾಣಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಯದುಪತಿ ಗೌಡರವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯಲ್ಲಿ ಒಂದು ತಿಂಗಳ ಕಾಲ ಉನ್ನತಿ ಫೌಂಡೇಶನ್ ವತಿಯಿಂದ ನಡೆದ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಮೊಬೈಲ್ ಬಳಕೆ ಕುರಿತು ಜಾಗೃತಿ ಮೂಡಿಸುವ ಕಿವಿಮಾತುಗಳನ್ನು ಆಡಿದರು.

ಈ ಸಂದರ್ಭದಲ್ಲಿ ಉನ್ನತಿ ಫೌಂಡೇಶನ್ ಇದರ ಚೇಂಜ್ ಮೇಕರ್ ಆಗಿರುವ ಮಿಸ್ ದಿವ್ಯಾ ಇವರು ಮಾತನಾಡಿ ಒಂದು ತಿಂಗಳು ಪ್ರತಿ ದಿನದ ಮೂರು ಗಂಟೆಗಳ ಕಾಲ ಕಮ್ಯುನಿಕೇಶನ್ ಸ್ಕಿಲ್, ಲರ್ನಿಂಗ್ ಸ್ಕಿಲ್, ಇಂಗ್ಲಿಷ್ ಸ್ಪೀಕಿಂಗ್ ಸ್ಕಿಲ್, ಲೀಡರ್ ಶಿಪ್ ಕ್ವಾಲಿಟಿ, ಟೀಮ್ ವರ್ಕ್, ಟೈಂ ಮೇನೇಜ್ ಮೆಂಟೇನ್ ಮತ್ತು ಫೇಸಿಂಗ್ ಇಂಟರ್ ವ್ಯೂ ಮುಂತಾದ ವಿಷಯಗಳ ಕುರಿತು ಮಾಹಿತಿಯನ್ನು ನೀಡಿದ್ದು ವಿದ್ಯಾರ್ಥಿನಿಯರ, ಆಡಳಿತ ಮಂಡಳಿಯ ಹಾಗೂ ಸಂಸ್ಥೆಯ ಎಲ್ಲರ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಮತಿ ಸುಮಂಗಲಾ ಜೈನ್ ಇವರು ಸಂಸ್ಥೆಯ ವಿದ್ಯಾರ್ಥಿನಿಯರು ಈವರೆಗೆ ಆಯ್ಕೆಯಾದ ವಿವಿಧ ಕಂಪೆನಿಗಳ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ವಿ ಪ್ರಕಾಶ್ ಕಾಮತ್ ಇವರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ಉತ್ತಮ ರೀತಿಯಲ್ಲಿ ಜೀವನ ಮೌಲ್ಯಗಳನ್ನು ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕುಮಾರಿ ಪ್ರಜ್ಞಾ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕುಮಾರಿ ಪೂರ್ಣ ಸ್ವಾಗತಿಸಿ ಕುಮಾರಿ ಆಶಿಕಾ ಧನ್ಯವಾದ ನೀಡಿದರು.