ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ಅಕ್ಷರೋತ್ಸವ

Suddi Udaya

ಗುರುವಾಯನಕೆರೆ: ಸಾರಸ್ವತ ಲೋಕದಲ್ಲಿ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೇ.22 ರ ಬುಧವಾರದಂದು ಎಕ್ಸೆಲ್ ವಿದ್ಯಾಸಂಸ್ಥೆಯು ಅಕ್ಷರೋತ್ಸವ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದು ನಾನಾ ಪ್ರದೇಶದಿಂದ ಉದಯೋನ್ಮುಖ ಕವಿ ಕವಯಿತ್ರಿಯರು ಭಾಗವಹಿಸಲಿದ್ದಾರೆ.

“ಮನುಜ ಕುಲ ತಾನೊಂದೆ ವಲಂ” ಎಂಬ ಮಹಾಕವಿ ಪಂಪನ ಕಾವ್ಯೋಕ್ತಿಯ ಪರಿಕಲ್ಪನೆಯಡಿಯಲ್ಲಿ ಮೂಡಿಬರುವ ಈ ಕಾರ್ಯಕ್ರಮವನ್ನು ಖ್ಯಾತ ಸಾಹಿತಿಗಳಾದ ಡಾ. ನರಹಳ್ಳಿ ಬಾಲಸುಬ್ರಮಣ್ಯರವರು ಉದ್ಘಾಟಿಸಲಿದ್ದಾರೆ. ನಾಡಿನ ಖ್ಯಾತ ಗಣಿತ ತಜ್ಞರಾದ ಹಾಗೂ ಎಕ್ಸೆಲ್ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಪ್ರಾಧ್ಯಾಪಕರಾಗಿರುವ ಶ್ರೀಅಭಿರಾಮ್ ಬಿ.ಎಸ್ ರವರ “ಅಚೀವರ್ಸ್ ಮ್ಯಾಥಮೆಟಿಕ್ಸ್” ಪಠ್ಯ ಪುಸ್ತಕದ ಲೋಕಾರ್ಪಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾದ ಶ್ರೀ ಶ್ರೀನಾಥ್ ಎಂ.ಪಿ ರವರು ಮಾಡಲಿದ್ದಾರೆ. ಹಾಗೆಯೇ ಎಕ್ಸೆಲ್ ವಿದ್ಯಾ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರಭಾಕರ್ ರವರು ಬರೆದ “ಕಂಪ್ಯೂಟರ್ ಸೈನ್ಸ್ ಸ್ಕ್ಯಾನರ್” ಪಠ್ಯಪುಸ್ತಕದ ಲೋಕಾರ್ಪಣೆಯನ್ನು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಸುವರ್ಣ ಇವರು ನೆರವೇರಿಸಲಿದ್ದಾರೆ.

ಇದರೊಂದಿಗೆ ನೂರಕ್ಕೂ ಹೆಚ್ಚಿನ ಉದಯೋನ್ಮುಖ ಕವಿ- ಕವಯಿತ್ರಿಯರ ರಚನಾತ್ಮಕ ಕವನಗಳನ್ನೊಳಗೊಂಡ ಕವಿತೆಗಳ ಸಂಗ್ರಹಾತ್ಮಕ ಪುಸ್ತಕವಾದ ‘ ಅಕ್ಕರೆಯ ಕವಿತೆಗಳು ‘ ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವರಾದ ಡಾ. ಸುಬ್ಬಣ್ಣ ರೈ ವರು ಲೋಕಾರ್ಪಣೆಗೊಳಿಸಲಿದ್ದಾರೆ.

‘ಮನುಜ ಕುಲ ತಾನೊಂದೇ ವಲಂ ..ಕನ್ನಡ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ….’ ವಿಶೇಷ ಉಪನ್ಯಾಸವನ್ನು ಡಾ. ರಾಧಾಕೃಷ್ಣ ಬೆಳ್ಳೂರು ಹಾಗೂ ಎಕ್ಸೆಲ್ ಅಕ್ಷರ ಗೌರವ ಸಮರ್ಪಣೆಯ ಅಭಿನಂದನಾ ಭಾಷಣವನ್ನು ಖ್ಯಾತ ಪತ್ರಕರ್ತ ಮತ್ತು ಲೇಖಕರಾದ ಜೋಗಿಯರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸೆಲ್ ಸಂಸ್ಥೆಯ ಸಂಸ್ಥಾಪಕರಾದ ಸುಮಂತ್ ಕುಮಾರ್ ಜೈನ್ ರವರು ವಹಿಸಿಕೊಳ್ಳುವರು. ಸಂಸ್ಥೆಯಿಂದ ಪ್ರತಿವರ್ಷ ಕೊಡಲ್ಪಡುವ “ಎಕ್ಸೆಲ್ ಅಕ್ಷರ ಗೌರವ ಸಮರ್ಪಣಾ” ದಡಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಿದೆ. ರೈತರನ್ನು ಅನ್ನದಾತರೆಂದು ಗೌರವಿಸಿ ಬಿ.ಕೆ. ದೇವರಾವ್ , ಸಾಹಿತ್ಯ ಪ್ರೀತಿಗೆ ಡಾ. ಬಿ. ಜನಾರ್ದನ ಭಟ್ , ಸಂಶೋಧನಾ ಕ್ಷೇತ್ರದಲ್ಲಿ ಡಾ ಉಮಾನಾಥ ಶೆಣೈ, ನಾಟಕ ರಂಗದಲ್ಲಿ ಶ್ರೀ ಗುರುರಾಜ್ ಮಾರ್ಪಳ್ಳಿ , ಯಕ್ಷಗಾನ ರಂಗದ ಶ್ರೀ ಅರುವ ಕೊರಗಪ್ಪ ಶೆಟ್ಟಿ, ದೈವ ನರ್ತಕರಾದ ಲೋಕಯ್ಯ ಸೇರ ಹಾಗೂ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಅಂಕಿತ ಪ್ರಕಾಶನದ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರಿಗೆ ನೀಡಲಾಗುತ್ತದೆ. ಮಧ್ಯಾಹ್ನ ಬಳಿಕ ಕವಿತೆ ವಾಚನ – ಗಾಯನ – ನೃತ್ಯ – ಕುಂಚ ಕಾರ್ಯಕ್ರಮದಲ್ಲಿ ನಾಡಿನ 25 ಕವಿತೆಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ ಕವಿ,ಸಾಹಿತಿ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಹೊತ್ತಿಗೆ ಮೂರು ಮುತ್ತು ಖ್ಯಾತಿಯ ಕುಳ್ಳಪ್ಪು ತಂಡದಿಂದ ,’ ಹೇ ದೇವ್ರೆ ಗಿರಾಕಿಯೇ ಇಲ್ಲ ಮಾರಾಯ ‘ ಎನ್ನುವ ನಗೆ ನಾಟಕ ನಡೆಯಲಿದೆ ಎಂದು ಪ್ರಕಟಣೆಯು ತಿಳಿಸಿದೆ.

Leave a Comment

error: Content is protected !!