
ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗದಿಂದ ಅಗ್ನಿ ಸುರಕ್ಷತೆ, ಆರೋಗ್ಯ ಸುರಕ್ಷತೆ, ಹಾಗೂ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ತರಬೇತಿ ಕಾರ್ಯಕ್ರಮವು ಮೇ 21 ರಂದು ನಡೆಯಿತು.
ಇತ್ತೀಚಿಗೆ ಸಮಾಜದಲ್ಲಿ ಅಗ್ನಿ ವಿಪತ್ತು ಸಂಭವಿಸುವಾಗ ಜನರ ವರ್ತನೆ ಬದಲಾಗಿದೆ. ಅಗ್ನಿ ವಿಪತ್ತು ಸಂಭವಿಸಿದಾಗ ಅದನ್ನು ತಡೆಯುವುದನ್ನು ಬಿಟ್ಟು ಮೊಬೈಲ್ ನಲ್ಲಿ ವಿಡಿಯೋ ಮಾಡುವ ಜನರೇ ಹೆಚ್ಚಾಗಿದ್ದಾರೆ. ಹಾಗಾಗಿ ಮುಂದೆ ಎಲ್ಲಾದರೂ ಈ ಘಟನೆಯನ್ನು ಹೇಗೆ ಎದುರಿಸಬೇಕು ಮತ್ತು ಹೇಗೆ ಜಾಗರೂಕರಾಗಬೇಕು ಎಂದು ಸುರಕ್ಷಿತ ಅಧಿಕಾರಿ ಸತ್ಯರಾಜ, ಮಂಗಳೂರು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯ ಸಂರಕ್ಷಣೆಯ ಕ್ರಮಗಳ ಕುರಿತಾಗಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಪ್ರತಿಯೊಬ್ಬರು ವೈಯಕ್ತಿಕವಾಗಿ ಸಮಾಜವನ್ನು ಕಾಪಾಡಬಹುದಾದ ಮಾರ್ಗ ಹೇಗೆ ಮತ್ತು ಬೇರೆಯವರಿಗೆ ಆರೋಗ್ಯದಲ್ಲಿ ಏರುಪೇರಾದಾಗ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕೆಂದು ಪ್ರಾಯೋಗಿಕವಾಗಿ ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಆರೋಗ್ಯ ಸುರಕ್ಷತೆಯು ಸಮಾಜದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಮನುಷ್ಯ ಆಘಾತಕ್ಕೊಳಗಾದಾಗ ಆತನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು, ಹೃದಯಘಾತವಾದಾಗ ಹೇಗೆ ಪ್ರಥಮ ಚಿಕಿತ್ಸೆ ಮಾಡುವುದು, ಪ್ರಥಮ ಚಿಕಿತ್ಸೆ ನೀಡಿ ಅವರ ಜೀವನವನ್ನು ಉಳಿಸುವುದು, ತಮ್ಮ ಮನೆ ಮತ್ತು ಸುತ್ತಮುತ್ತಲಿನ ಮನೆಯವರಿಗೆ ತುರ್ತು ಸಂಧರ್ಭಗಳಲ್ಲಿ ಹೇಗೆ ಸಹಾಯ ಮಾಡುವುದು ಎನ್ನುವುದರ ಕುರಿತಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಕಾಲೇಜು ಉಜಿರೆಯ ಪ್ರಾಂಶುಪಾಲರಾದ ಡಾ. ಬಿ. ಎ ಕುಮಾರ ಹೆಗ್ಡೆ ವಹಿಸಿದ್ದರು.
ಎಸ್. ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ . ಪಿ., ಹಾಗೂ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ರವಿಶಂಕರ್ ಕೆ.ಆರ್ ಉಪಸ್ಥಿತರಿದ್ದರು. ಪ್ರಥಮ ವರ್ಷ ಸಮಾಜ ಕಾರ್ಯ ವಿದ್ಯಾರ್ಥಿನಿಗಳಾದ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಮೌಲ್ಯ ವಂದನಾರ್ಪಣೆಗೈದರು.