ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರ ಶಾಸಕ ಹರೀಶ್ ಪೂಂಜ ಅವರ ಮೇಲೆ ವಿನಾಕಾರಣ ಕೇಸು ದಾಖಲಿಸಿ, ಅವರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈ ಹಾಕಿ ಮುಂದೆ ಆಗುವ ಯಾವುದೇ ವಿಚಾರಗಳಿಗೆ ಪೊಲೀಸರು ಹಾಗೂ ಸರಕಾರ ನೇರ ಹೊಣೆಯಾಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಅಕ್ರಮ ಪ್ರಕರಣವೊಂದರಲ್ಲಿ ಶಾಸಕ ಹರೀಶ್ ಪೂಂಜರ ಮೇಲೆ ಕೇಸು ಹಾಕಿ ಅವರನ್ನು ಬಂಧನ ಮಾಡಲು ಪೊಲೀಸರು ಹೋಗಿರುವುದು ಖಂಡನೀಯ, ಅಕ್ರಮ ಮಾಡಿದವನ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ, ಅವರ ಮೇಲೆ ಕಠಿಣ ಕ್ರಮ ಆಗಲಿ. ಆದರೆ ಈ ಪ್ರಕರಣದಲ್ಲಿ ನಮ್ಮ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಅವರನ್ನು ಕೇಸಿನಲ್ಲಿ ಸೇರಿಸಿ, ರಾತ್ರೋರಾತ್ರಿ ಅವರನ್ನು ಬಂಧಿಸಿ, ಪಿತೂರಿ ಮಾಡಿರುವುದನ್ನು ಹರೀಶ್ ಪೂಂಜ ಅವರು ಠಾಣೆಗೆ ಹೋಗಿ ಪ್ರಶ್ನಿಸಿರುವುದಕ್ಕೆ ಅವರ ಮೇಲೆ ಕೇಸು ಹಾಕಲಾಗಿದೆ. ಕಾರ್ಯಕರ್ತರಿಗೆ ಅನ್ಯಾಯವಾದಾಗ, ಅವರ ಮೇಲೆ ದಬ್ಬಾಳಿಕೆ ಮಾಡಿದಾಗ ಅದರ ವಿರುದ್ಧ ಪ್ರತಿಭಟನೆ ಮಾಡಿ, ಶಾಸಕರು ಉದ್ವೇಗದಿಂದ ಮಾತನಾಡಿದ್ದಾರೆ. ಅದು ಸರಿ ಅಲ್ಲ ಎಂದು ಅವರಿಗೂ ಅನಿಸಿದೆ. ಕಾರ್ಯಕರ್ತರ ಮೇಲೆ ರಾಜ್ಯದಾದ್ಯಂತ ದಬ್ಬಾಳಿಕೆಗಳು ಆಗುತ್ತಿದೆ. ಶಾಸಕರ ಬಂಧನ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದೆ ನಡೆಯುವ ವಿಚಾರಗಳಿಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆಯಾಗಬೇಕಾಗುತ್ತದೆ. ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಮಾಡಿದವರು ಮೇಲೆ ಕ್ರಮ ಕೈಗೊಳ್ಳಲು ಸರಕಾರ ಹಿಂದೆ ಮುಂದೆ ನೋಡುತ್ತಿದೆ. ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಸಹಿಸುವುದಿಲ್ಲ, ಶಾಸಕರ ಬಂಧನ ಒಳ್ಳೆಯ ಸಂದೇಶ ನೀಡುವುದಿಲ್ಲ, ಗೃಹ ಸಚಿವರು ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಗಳ ಮಾತನಾಡಿ ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.