ಬೆಳ್ತಂಗಡಿ; 2020 ರ ಜೂನ್ 26 ರಂದು ಕಲ್ಮಂಜ ಮಿಯಾ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರ ಕೈ ಕಾಲು ಕಟ್ಟಿಹಾಕಿ ನಗ- ನಗದು ದರೋಡೆ ಮಾಡಿದ ಪ್ರಕರಣವನ್ನು ಬಂಧಿತರಾಗಿರುವ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾಗಿದ್ದು ಇದೀಗ ಮೂವರೂ ಆರೋಪಿಗಳಿಗೆ ಮುಂದಿನ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಪ್ರಕರಣದಲ್ಲಿ ಬಂಧಿತರಾಗಿದ್ದು ಹೆಚ್ಚಿನ ತನಿಖೆಗೆ ಒಳಪಡಿಸಲು ಹಾಗೂ ಕಳವು ಗೈದಿರುವ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು.
ಇದೀಗ ಮಹಜರು ಪ್ರಕ್ರೀಯೆ ಗಳು ಮುಕ್ತಾಯವಾಗಿದ್ದು ಅವರನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿದಿದಾಗ ನ್ಯಾಯಾಲಯ ಅವರಿಗೆ ಮುಂದಿನ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಆ ಹಿನ್ನೆಲೆಯಲ್ಲಿ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಅಡಿಕೆ ವ್ಯಾಪಾರಿ ರಿಯಾಝ್(41), ಆತನ ಸಹೋದರ ಬೆಂಗಳೂರಿನಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ನವಾಝ್ (38) ಮತ್ತು ಬೆಂಗಳೂರು ನಿವಾಸಿ ಕೃಷ್ಣ (37) ಎಂಬವರನ್ನು ಇದೀಗ ಮಂಗಳೂರಿನ ಸಬ್ ಜೈಲಿಗೆ ಕಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ. ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಅಚ್ಚುತ ಭಟ್ ಎಂಬವರ ಮನೆಯಲ್ಲಿ 2020 ಜೂನ್ 26 ರಂದು ಮಧ್ಯ ರಾತ್ರಿ 2.30 ರಿಂದ 3.30 ರ ಮಧ್ಯೆ ಮನೆ ದರೋಡೆ ನಡೆದಿತ್ತು. ಅಚ್ಚುತ ಭಟ್ ಅವರ ತಮ್ಮನ ಪತ್ನಿಯ ಕುತ್ತಿಗೆಯಿಂದ ಒಂದು ಚಿನ್ನದ ಕರಿಮಣಿ ಸರ ಹಾಗೂ ತಾಯಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಕಿತ್ತುಕೊಂಡಿದ್ದರು. ಅಲ್ಲದೇ ಮನೆಯಲ್ಲಿ ಹುಡುಕಾಡಿ ಕಬ್ಬಿಣದ ಕಪಾಟನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬೆಳ್ಳಿಯ 4 ತಂಬಿಗೆ, ತಾಯಿಯ ಚಿನ್ನದ ಸರ ಮತ್ತು ಒಂದು ಉಂಗುರವನ್ನು ಹಾಗೂ ನಗದು ರೂ 25 ಸಾವಿರ ವನ್ನು ತೆಗೆದುಕೊಂಡಿದ್ದರು. ತಮ್ಮನ ಪತ್ನಿಯ ಬ್ಯಾಗ್ ನಲ್ಲಿದ್ದ ಮಕ್ಕಳ 3 ಸಣ್ಣ ಚೈನ್, ಒಂದು ದೊಡ್ಡ ಚೈನ್, ನೆಕ್ಲೇಸ್, 5 ಸೆಟ್ ಕಿವಿಯ ಬೆಂಡೋಲೆ, 3 ಉಂಗುರ, 4 ಬಳೆಗಳನ್ನು ಆಗಂತುಕರು ದರೋಡೆಗೈದಿದ್ದರು. ಅಲ್ಲದೇ ಅವರ ಮೊಬೈಲ್ ಮತ್ತು ತಮ್ಮನ ಪತ್ನಿಯ 2 ಮೊಬೈಲ್ ಸೆಟ್ ಗಳನ್ನು ನೆಲಕ್ಕೆ ಹೊಡೆದು ಜಖಂಗೊಳಿಸಿದ್ದರು. ಆರೋಪಿತರುಗಳು, ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಂದು ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿ ಪರಾರಿಯಾಗಿದ್ದರು.