ನಾವೂರು ಸರಕಾರಿ ಪ್ರೌಢಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಮೇ 31ರಂದು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಉಮೇಶ್ ಪ್ರಭು ದೀಪ ಪ್ರಜ್ವಲಿಸಿ 8ನೇ ತರಗತಿಗೆ ದಾಖಲಾದ ಮತ್ತು ಇತರ ಎಲ್ಲ ಮಕ್ಕಳಿಗೂ ಶೈಕ್ಷಣಿಕ ವರ್ಷದ ಕಲಿಕಾ ಚಟುವಟಿಕೆಗಳಿಗೆ ಶುಭ ಹಾರೈಸಿದರು. ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಪುರ್ಷ್ಪಾಚನೆ ಗೈದು ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.
ನಾವೂರು ಗ್ರಾಮ ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷ ಗಣೇಶ್ ಗೌಡ ಶಾಲೆಯ ಅಭಿವೃದ್ಧಿಗೆ ಪಂಚಾಯಿತಿ ವತಿಯಿಂದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಾವೂರು ಆರೋಗ್ಯ ಕೇಂದ್ರದ ವೈದ್ಯ ಡಾ| ಪ್ರದೀಪ್ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಸಾಧಕರನ್ನು ಗೌರವಿಸುವುದರ ಜೊತೆಗೆ ಎಲ್ಲಾ ಮಕ್ಕಳಿಗೂ ಉತ್ತಮ ಸಾಧನೆ ಮಾಡಿ ಊರಿಗೆ ಕೀರ್ತಿ ತರಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.
ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಎಂ. ಮಾತನಾಡಿ ಶಾಲಾ ಫಲಿತಾಂಶ, ಮಕ್ಕಳ ಸಾಧನೆ ಎಸ್‌ಡಿಎಂಸಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ನೆನಪಿಸುತ್ತ ಮಕ್ಕಳಲ್ಲಿ ಇನ್ನಷ್ಟು ಸಾಧನೆ ಮತ್ತು ಎಲ್ಲರ ಸಹಕಾರವನ್ನು ಯಾಚಿಸಿ ಶುಭ ಹಾರೈಸಿದರು.
ಗಣಿತ ಶಿಕ್ಷಕಿ ಪುಷ್ಪ ರವರ ಸಹಕಾರದೊಂದಿಗೆ ಆಂಗ್ಲ ಭಾಷಾ ಶಿಕ್ಷಕ ಸುಧಾಕರ ಶೆಟ್ಟಿ ರವರು ಎಸ್‌ಎಸ್‌ಎಲ್‌ಸಿ ಸಾಧಕರ ಪಟ್ಟಿಯನ್ನು ವಾಚಿಸಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ಎಸ್‌ಡಿಎಂಸಿ ಸದಸ್ಯರು, ಶಾಲಾ ಅಧ್ಯಾಪಕ ವೃಂದ, ಪೋಷಕರು, ಹಳೆ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ಉಷಾ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಭವ್ಯ ಸ್ವಾಗತಿಸಿದರು. ಶ್ರೀಮತಿ ಮೀನಾ ವಂದಿಸಿದರು.