ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ 2024 – 25 ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮತ್ತು ಶಾಲೆಯ ಆಡಳಿತ ಮಂಡಳಿಯವರು ಎಲ್ಲಾ ತರಗತಿಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ಬರೆಯುವ ಪುಸ್ತಕಗಳ ವಿತರಣಾ ಸಮಾರಂಭ ಜರಗಿತು.
ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ದುರ್ಗಾಪ್ರಸಾದ್ ಕೆರ್ಮುಣ್ಣಾಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಾಲೆಯೆಂದರೆ ಕೇವಲ ಪಾಠ, ಪರೀಕ್ಷೆ, ಫಲಿತಾಂಶ ನೀಡುವ ಕೇಂದ್ರವಲ್ಲ. ಅಲ್ಲಿ ನಡೆಸುವ ಇತರ ಚಟುವಟಿಕೆಗಳೂ ಅಷ್ಟೇ ಮುಖ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳೂ ಒಂದೊಂದು ವಿಭಾಗದಲ್ಲಿ ಪ್ರವೀಣರಿರುತ್ತಾರೆ. ಎಲ್ಲವೂ ಸೇರಿ ಸತ್ವಯುತ ಕಲಿಕೆಯಾಗುತ್ತದೆ. ಆ ಮೂಲಕ ಪರಸ್ಪರ ವಿಶ್ವಾಸವನ್ನು ಬೆಳೆಸಿಕೊಂಡು ಯಶಸ್ವೀ ವಿದ್ಯಾರ್ಥಿಗಳಾಗಬೇಕು ಎಂದು ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲರವರು ಶುಭಹಾರೃಸಿದರು. ಶಾಲೆಯ ಶಿಕ್ಷಕ ಸಿಬ್ಬಂದಿಗಳೆಲ್ಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ಹಿರಿಯ ಶಿಕ್ಷಕಿ ಶ್ರೀಮತಿ ರಾಜಶ್ರೀಯವರು ವಂದಿಸಿ, ಶಿಕ್ಷಕ ಸುಮನ್ ಯು ಎಸ್ ರವರು ಕಾರ್ಯಕ್ರಮ ನಿರೂಪಿಸಿದರು.