ಯುವವಾಹಿನಿ ಬೆಂಗಳೂರು ಘಟಕದ ಪದಗ್ರಹಣ ಸಮಾರಂಭ

Suddi Udaya

ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ಸ್ವಾಮಿ ವಿವೇಕಾನಂದರ ಚಿಂತನಾಧಾರೆ ಮತ್ತು ಅಂಬೇಡ್ಕರ್ ಅವರ ಪ್ರಾಯೋಗಿಕ ಬದುಕಿನಿಂದ ಯುವವಾಹಿನಿ ಸಂಘಟನೆಯು ಪ್ರೇರಣೆ ಪಡೆದು, ಮುನ್ನಡೆದರೆ ಸಮಾಜದಲ್ಲಿ ಇನ್ನಷ್ಟು ಸುಧಾರಣೆ ಕಾಣಲು ಸಾಧ್ಯ ಎಂದು ಮಂಗಳೂರು ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದರು.

ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ನಾಗಪುರ ವಾರ್ಡ್‌ನ ಡಾ.ರಾಜ್‌ಕುಮಾರ್‌ ಸಭಾಭವನದಲ್ಲಿ ಜೂ.2ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಬೆಂಗಳೂರು ಘಟಕದ 2024-25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಯುವ ಸಮುದಾಯ ಸಂಘಟಿತರಾದರೆ ಸಮಾಜದಲ್ಲಿ ಮಹತ್ತರ ಬದಲಾವಣೆ ತರಬಹುದು ಎಂಬುದಕ್ಕೆ ಕಳೆದ ಹಲವು ದಶಕಗಳಿಂದ ವಿದ್ಯೆ, ಉದ್ಯೋಗ ಮತ್ತು ಸಂಪರ್ಕದ ಉದ್ದೇಶದಿಂದ ಸೇವೆ ಸಲ್ಲಿಸುತ್ತಿರುವ ಯುವವಾಹಿನಿ ಸಂಘಟನೆಯೇ ಉತ್ತಮ ಉದಾಹರಣೆ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ, ರಾಜಧಾನಿಯಲ್ಲೂ ಸಮಾಜದ ಯುವ ಮನಸ್ಸುಗಳನ್ನು ಜಾಗೃತಿಗೊಳಿಸುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ರಂಗಭೂಮಿ ಕಲಾವಿದ, ಚಲನಚಿತ್ರ ನಟ ತುಳುವ ಮಾಣಿಕ್ಯ ಅರವಿಂದ ಬೋಳಾರ್‌ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜಮುಖಿ ಕಾರ್ಯಗಳನ್ನು ಮಾಡಲು ಸಂಘಟನೆ ಅಗತ್ಯ. ಸಮಾಜದ ಧ್ವನಿಯಾಗಿರುವ ಯುವವಾಹಿನಿ ಸಂಘಟನೆಯು ಬೆಂಗಳೂರಿನಲ್ಲಿ ಇನ್ನಷ್ಟು ಗಟ್ಟಿಯಾಗಬೇಕು. ಹಾಗಾದಲ್ಲಿ ಮಾತ್ರ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಲು ಶಕ್ತಿ ಸಿಗುತ್ತದೆ ಎಂದು ಹೇಳಿದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್‌ ಕೆ. ಪೂಜಾರಿ ಹೊಸ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಯುವವಾಹಿನಿ ಸಂಘಟನೆಯು 33 ಘಟಕಗಳನ್ನು ಹೊಂದಿದ್ದು, ಐದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆರಂಭಗೊಂಡ ಘಟಕವು ಅತ್ಯಂತ ಕ್ರಿಯಾಶೀಲವಾಗಿದ್ದು, ಇದರ ಮೂಲಕ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

ಕಿರುತೆರೆ ನಿರ್ದೇಶಕ ಸುಭಾಷ್‌ ಅರುವ ಮಾತನಾಡಿ, ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ. ಪ್ರತಿಭೆಯೊಂದಿಗೆ ತ್ಯಾಗ, ಪರಿಶ್ರಮ, ಛಲವಿದ್ದರೆ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಯುವವಾಹಿನಿ ಸಂಘಟನೆಯಂತಹ ಸಂಘಟನೆಗಳು ಪ್ರತಿಭೆಗಳಿಗೆ ನೀರೆರೆಯುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ಯುವವಾಹಿನಿ ಬೆಂಗಳೂರು ಘಟಕದ ಅಧ್ಯಕ್ಷ ಮಿತೇಶ್ ಕುಮಾರ್ ವಹಿಸಿದ್ದರು. ಘಟಕದ ಕಾರ್ಯದರ್ಶಿ ಪ್ರಸಾದ್‌ ಕುಮಾರ್‌ ಸಿ.ಪಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀಧರ್ ಡಿ. ಪೂಜಾರಿ ಇದ್ದರು. ಉಪಾಧ್ಯಕ್ಷ ಶಶಿಧರ್ ಕೋಟ್ಯಾನ್ ಪ್ರಸ್ತಾವಿಕ ಮಾತನಾಡಿದರು. ಸಕೇಶ್‌ ಬುನ್ನನ್‌ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರು ಘಟಕ ನಿಯೋಜಿತ ಕಾರ್ಯದರ್ಶಿ ಧನುಷ್‌ ವಂದಿಸಿದರು.

ನಿಯೋಜಿತ ಅಧ್ಯಕ್ಷ ಪ್ರಸಾದ್‌ ಕುಮಾರ್ ಕಲ್ಲಾಜೆ ಮತ್ತು ಅವರ 33 ಪದಾಧಿಕಾರಿಗಳ ತಂಡವು ಪ್ರತಿಜ್ಞಾವಿಧಿ ಸ್ವೀಕರಿಸಿತು. ಇದೇ ವೇಳೆ ಅರವಿಂದ ಬೋಳಾರ್‌, ಕೇಶವ ಬಂಗೇರ, ಸುಭಾಷ್‌ ಅರುವ, ಹರೀಶ್‌ ಕೆ. ಪೂಜಾರಿ, ಮಿತೇಶ್‌ ಕುಮಾರ್‌, ಪ್ರಸಾದ್‌ ಕುಮಾರ್ ಸಿ.ಪಿ, ಸ್ವಾತಿ ಪೂಜಾರಿ, ರಾಘವೇಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Comment

error: Content is protected !!