ಮುಂಡಾಜೆ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಹಾಗೂ ಊರ ದಾನಿಗಳ ಸಹಕಾರದಲ್ಲಿ ಮುಂಡಾಜೆಯ ವೈಸಿ ಭವನದಲ್ಲಿ ಗ್ರಾಮದ ಆಯ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ ಜರಗಿತು.
ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಪೂರ್ವಾಧ್ಯಕ್ಷ ಸುಜಿತ್ ಎಂ.ಭಿಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ನಮ್ಮನ್ನು ಗುರುತಿಸಿದವರನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಅವರಿಗೆ ನೆರವಾಗುವ ಸಂಕಲ್ಪ ಮಾಡಬೇಕು. ಸಮಾಜವನ್ನು ಕಟ್ಟುವ ಕೆಲಸಕ್ಕೆ ವಿದ್ಯಾರ್ಥಿ ಸಮೂಹ ಮುಂದಾಗ ಬೇಕಿದ್ದು ಸಿಗುವ ಅವಕಾಶಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ಛಲವನ್ನು ಹೊಂದಿ, ಸಂಸ್ಕಾರ ಮತ್ತು ಶಿಸ್ತಿನ ಜೀವನ ನಡೆಸಬೇಕು. ಪ್ರಯತ್ನಕ್ಕೆ ತಕ್ಕ ಯಶಸ್ಸು ಸಿಗುವುದು ನಿಶ್ಚಿತ” ಎಂದರು.
ಉದ್ಯಮಿ ಅರೆಕಲ್ ರಾಮಚಂದ್ರ ಭಟ್ ಮಾತನಾಡಿ “ಪ್ರತಿಭೆಗಳನ್ನು ಗುರುತಿಸುವುದರಿಂದ ಎಲೆಮರೆಯ ಕಾಯಿಗಳು ಹೊರ ಬರುತ್ತವೆ ಹಾಗೂ ಅವರ ಭವಿಷ್ಯ ಗಟ್ಟಿಯಾಗಲು ಇದು ನಾಂದಿಯಾಗುತ್ತದೆ. ಗುರುತಿಸುವುದರಿಂದ ನಮ್ಮ ಜವಾಬ್ದಾರಿ ಹೆಚ್ಚುವುದಲ್ಲದೆ ಸಮಾಜಕ್ಕೆ ಸಹಕಾರ ನೀಡಲು ಪ್ರೇರಣೆಯಾಗುತ್ತದೆ” ಎಂದರು.
ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ, ಮಾಜಿ ಸದಸ್ಯೆ ಅಶ್ವಿನಿ ಎ. ಹೆಬ್ಬಾರ್, ಅನಂತ ಫಡ್ಕೆ ಮೆಮೋರಿಯಲ್ ಟ್ರಸ್ಟ್ ಸಂಚಾಲಕ ಪ್ರಹ್ಲಾದ ಫಡ್ಕೆ,ವೈದ್ಯ ಡಾ. ಶಿವಾನಂದ ಸ್ವಾಮಿ, ಉಪನ್ಯಾಸಕ ಸಚಿನ್ ಹೆಬ್ಬಾರ್, ಉದ್ಯಮಿ ಶಮಂತ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.ಸಂಚಾಲಕ ನಾಮದೇವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶಶಿಧರ ಠೋಸರ್ ಸ್ವಾಗತಿಸಿದರು. ಸದಸ್ಯೆ ಜತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಸಾಂತಪ್ಪ ವಂದಿಸಿದರು.