ಧರ್ಮಸ್ಥಳ: ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಅಪರೂಪದ ವಸ್ತುವೊಂದು ಜೂ. 9ರಂದು ಸೇರ್ಪಡೆಯಾಗಲಿದೆ. ಕುಂದಾಪುರದ ಪಂಚಗಂಗಾ ನದಿಯಲ್ಲಿ ಚಿಪ್ಪು ಸಾಗಾಟ ಮಾಡುತ್ತಿದ್ದ ಬಾಲಾಜಿ ಹೆಸರಿನ ಹಾಯಿದೋಣಿಯನ್ನು ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ.
ಕುಂದಾಪುರ ಖಾರ್ವಿಕೇರಿಯ ಮಧ್ಯಕೇರಿಯ ನಿವಾಸಿ ದಿ. ಶಂಕರ್ ಖಾರ್ವಿಯವರ ಪುತ್ರ ವೆಂಕಟೇಶ್ ಅವರ ಮಾಲೀಕತ್ವದ ಈ ಹಾಯಿದೋಣಿ ಈಗ ಲಂಗರು ಹಾಕಿದ ಸ್ಥಿತಿಯಲ್ಲಿದೆ. ಅದರ ಸದ್ಬಳಕೆಯ ಉದ್ದೇಶದಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಲ್ಲಿ ಪ್ರಸ್ತಾವಿಸಿದ್ದು, ಅವರು ಒಪ್ಪಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ದೋಣಿಯನ್ನು ಶ್ರೀ ಕ್ಷೇತ್ರಕ್ಕೆ ಕೊಂಕಣ ಖಾರ್ವಿ ಸಮಾಜದ ಕಾಣಿಕೆಯಾಗಿ ನೀಡಲಾಗುವುದು ಎಂದು ಕುಂದಾಪುರ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಜಯಾನಂದ ಖಾರ್ವಿ ತಿಳಿಸಿದ್ದಾರೆ.
14 ವರ್ಷಗಳ ಹಿಂದೆ ಚಿಪ್ಪು ಸಾಗಾಟದ ಉದ್ದೇಶಕ್ಕೆ ದೋಣಿಯ ನಿರ್ಮಾಣದ ಹುಡುಕಾಟದಲ್ಲಿದ್ದಾಗ ಕಂಡೂರು ಸಮೀಪ ದೊರೆತ ಸುಮಾರು 20 ಅಡಿ ಸುತ್ತಳತೆಯ ಬೃಹತ್ ಮರದಿಂದ ದೋಣಿ ನಿರ್ಮಿಸಲಾಗಿದೆ. 51 ಅಡಿ ಉದ್ದ, 10 ಅಡಿ ಅಗಲದ ಈ ದೋಣಿಯಲ್ಲಿ ಒಂದು ಮುಕ್ಕಾಲು ಲೋಡ್ ಚಿಪ್ಪು ಸಾಗಾಟ ಮಾಡಲಾಗುತ್ತಿತ್ತು. ಅಂದಿನ ದಿನಗಳಲ್ಲಿಯೇ ದೋಣಿ ನಿರ್ಮಿಸಲು 2.5 ಲಕ್ಷ ರೂ.ವೆಚ್ಚವಾಗಿತ್ತು.
ಜೂ 9ರಂದು ಮೆರವಣಿಗೆಯ ಮೂಲಕ ದೋಣಿಯನ್ನು ಕುಂದಾಪುರ ಶಾಸ್ತ್ರಿ ಸರ್ಕಲ್ ತನಕ ತರಲಾಗುವುದು. ಅಲ್ಲಿಂದ ದೊಡ್ಡ ಲಾರಿಯಲ್ಲಿ ದೋಣಿಯನ್ನು ಧರ್ಮಸ್ಥಳಕ್ಕೆ ತರಲಾಗುವುದು.