ಕಳೆಂಜ ರಾಜೇಶ್ ಎಂ.ಕೆ ರವರ ಪೋಕ್ಸೋ ಪ್ರಕರಣ: ಅಪ್ರಾಪ್ತ ವಯಸ್ಕಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಕಾನೂನು ವ್ಯವಸ್ಥೆಯ ದುರ್ಬಳಕೆ ಮಾಡಿದ ಬಗ್ಗೆ ಮಂಗಳೂರು ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಕಳೆಂಜ ಗ್ರಾಮಸ್ಥರಿಂದ ಮನವಿ

Suddi Udaya

ಬೆಳ್ತಂಗಡಿ: ಕಳೆಂಜ ಗ್ರಾಮದ ನಿಡ್ಡಾಜೆ ನಿವಾಸಿಯಾದ ರಾಜೇಶ್ ಎಮ್. ಕೆ., ಇವರು ಸುಮಾರು ಮೂರು ವರ್ಷದಿಂದ ಕಾಯರ್ತಡ್ಕ ಪೇಟೆಯಲ್ಲಿ ಅಡಿಕೆ ಖರೀದಿ ಅಂಗಡಿಯನ್ನು ನಡೆಸಿಕೊಂಡಿರುತ್ತಾರೆ.ಜೂ.04ರಂದು ರಾಜೇಶ್‌ರವರು ವಾಹನದಲ್ಲಿ ಮನೆಗೆ ತೆರಳುವ ಸಂದರ್ಭದಲ್ಲಿ ಮುಖ್ಯ ರಸ್ತೆಯ ಕಜೆ ಎಂಬಲ್ಲಿ ತಲುಪಿದಾಗ, ದೂರವಾಣಿ ಕರೆ ಬಂದ ಕಾರಣ ರಾಜೇಶ್‌ ರವರು ವಾಹನವನ್ನು ನಿಲ್ಲಿಸಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವ ಸಮಯ, ರಸ್ತೆಯಿಂದ ಸುಮಾರು 100 ಮೀಟರ್ ದೂರದ ಮನೆಯಲ್ಲಿ ವಾಸವಾಗಿರುವ ಕಡೆ ಮೋಂಟಿ ಗೌಡ ಎಂಬುವವರು ಅತ್ಮೀಯವಾಗಿ ಮಾತನಾಡುತ್ತಿರುವಾಗ ಮೋಂಟಗೌಡರ ಮಗ ಕುಶಾಲಪ್ಪ ಗೌಡನು ಏಕಾಏಕಿ ತನ್ನ ಕೈಯಲ್ಲಿ ಉದ್ದನೆಯ ತಲವಾರು ಹಿಡಿದುಕೊಂಡು ಬಂದು ರಾಜೇಶ್‌ರವರಿಗೆ ಜಾತಿ ನಿಂದನೆ ಮಾಡಿ, ತಲವಾರ್‌ನಿಂದ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದು, ಪ್ರಕೃತ ರಾಜೇಶ್‌ರವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಂತರದಲ್ಲಿ ಕುಶಾಲಪ್ಪ ಗೌಡರು ನಡೆಸಿದ ಕೃತ್ಯವನ್ನು ಮುಚ್ಚಿ ಹಾಕವ ಸಲುವಾಗಿ ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಗೆ ಸ್ವತಃ ದಾಖಲಾಗಲು ಹೋದಾಗ, ಆತನಿಗೆ ಯಾವುದೇ ಅನಾರೋಗ್ಯ, ಗಾಯ ಅಥವಾ ಬೇರಾವುದೇ ಕಾರಣಗಳಿಲ್ಲದೆ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಣೆ ಮಾಡಿರುತ್ತಾರೆ. ಇದರಿಂದಾಗಿ, ಕುಶಾಲಪ್ಪ ಗೌಡನು ತನ್ನ ಕೃತ್ಯವನ್ನು ಮುಚ್ಚಿಟ್ಟು, ಪ್ರಕರಣವನ್ನು ರಾಜೇಶ್‌ರವರ ವಿರುದ್ಧವೇ ವರ್ಗಾಯಿಸುವ ದುರುದ್ದೇಶದಿಂದ, ಒಂದು ರಾಜಕೀಯ ಪಕ್ಷದ ಕೆಲವೊಂದು ಪ್ರಭಾವಿಗಳ ಸಹಾಯವನ್ನು ಪಡೆದುಕೊಂಡು, ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲು ಮಾಡಿ ರಾಜೇಶ್ ಎಂ. ಕೆ. ಇವರ ಮೇಲೆ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ‘ಮಾನಭಂಗ ಯತ್ನ’ ಎಂಬ ಸುಳ್ಳು ಪ್ರಕರಣವನ್ನು ದಾಖಲಿಸಿರುತ್ತಾರೆ. ನಿಜವಾಗಿ, ಅಂತಹ ಯಾವುದೇ ಘಟನೆಗಳೂ ನಡೆದಿಲ್ಲ ಎಂಬುದಕ್ಕೆ ರಾಜೇಶ್‌ರವರ ಮೇಲೆ ಕುಶಾಲಪ್ಪ ಗೌಡನು ತಲವಾರಿನಿಂದ ಹಲ್ಲೆ ನಡೆಸುವ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗಳಾಗಿದ್ದವರೇ ಸಾಕ್ಷಿಗಳಾಗಿರುತ್ತಾರೆ.

ಕುಶಾಲಪ್ಪ ಗೌಡರು ಮಾಡಿದ ಕುಕೃತ್ಯವನ್ನು ಮುಚ್ಚಿ ಹಾಕುವ ಸಲುವಾಗಿ ಹಾಗೂ ರಾಜೇಶ್ ಎಂ. ಕೆ. ಇವರ ಮೇಲೆ ರಾಜಕೀಯ ದ್ವೇಷದ ಕಾರಣದಿಂದ ಸುಳ್ಳು ಪ್ರಕರಣವನ್ನು ದಾಖಲಿಸುವ ದುರುದ್ದೇಶದಿಂದ ತನ್ನ ಅಪ್ರಾಪ್ತ ವಯಸ್ಕ ಮಗಳನ್ನೇ ಆಸ್ಪತ್ರೆಯಲ್ಲಿ ದಾಖಲು ಮಾಡಿ ‘ಮಗಳನ್ನು ಮಾನಭಂಗಕ್ಕೆ ಯತ್ನಿಸಿದ್ದಾರೆ’ ಎಂಬ ಸುಳ್ಳು ಪ್ರಕರಣವನ್ನು ದಾಖಲಿಸಿರುತ್ತಾರೆ. ಯಾವುದೇ ಹೆಣ್ಣು ಮಕ್ಕಳನ್ನು ಅದರಲ್ಲೂ ಅಪ್ರಾಪ್ತ ವಯಸ್ಕರನ್ನು ಸಮಾಜಘಾತುಕ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುವುದು ಸಮಾಜದಲ್ಲಿ ಅತ್ಯಂತ ಕಟ್ಟ ಬೆಳವಣಿಗೆಗಳಿಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ ಹಾಗೂ ಕಾನೂನಿಗೂ ವಿರುದ್ಧವಾಗಿರುತ್ತದೆ. ಹೆಣ್ಣುಮಕ್ಕಳು, ಅದರಲ್ಲಿಯೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಈ ರೀತಿಯಾಗಿ ದುರುಪಯೋಗಪಡಿಸಿಕೊಳ್ಳುವುದು ಸಹಾ ಹೆಣ್ಣಿನ ಶೋಷಣೆಯಾಗಿದ್ದು, ಇಂತಹ ಕೃತ್ಯವನ್ನು ಒಂದು ಸ್ಪಷ್ಟ ಸಮಾಜ ಒಪ್ಪುವಂತದ್ದಲ್ಲ. ಆದುದರಿಂದ ಮೇಲೆ ಹೇಳಿದ ಕುಶಾಲಪ್ಪ ಗೌಡ ಮತ್ತು ಅವರ ಅಪ್ರಾಪ್ತ ವಯಸ್ಸಿನ ಮಗಳನ್ನು ಸೂಕ್ತವಾಗಿ ವಿಚಾರಣೆಗೊಳಪಡಿಸಿ, ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಮೂಲಕ, ಸಮಾಜದಲ್ಲಿ ಮುಂದಕ್ಕೆ ಇಂತಹ ದುರುದ್ದೇಶಪೂರಿತ ಹಾಗೂ ಅವಮಾನಕರ ಕೃಷ್ಣಗಳು ನಡೆಯದಂತೆ ಮಾಡಿ, ಪರಿಶಿಷ್ಠ ವರ್ಗಕ್ಕೆ ಸೇರಿದ ರಾಜೇಶ್ ಎಂ. ಕೆ. ಇವರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ಈ ಮೂಲಕ ಮಂಗಳೂರು ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಯವರಿಗೆ, ಬೆಳ್ತಂಗಡಿ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಿಗೆ ಹಾಗೂ ಧರ್ಮಸ್ಥಳ ಆರಕ್ಷಕ ಠಾಣೆಯ ಠಾಣಾ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಾರದಾ, ನಿಡ್ಲೆ ಸೇ.ಸಹಕಾರಿ ಸಂಘದ ನಿರ್ದೇಶಕಿ ವಿಜಯಲಕ್ಷ್ಮೀ, ಧರ್ಣಮ್ಮ ನಿಡ್ಡಾಜೆ, ಸುಂದರಿ ನಿಡ್ಡಾಜೆ, ಗಿರಿಜಾ ನಿಡ್ಡಾಜೆ, ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸನ್ನ ಎ.ಪಿ, ನಿಡ್ಲೆ ಸೇವಾ ಸರಕಾರಿ ಸಂಘದ ಮಾಜಿ ಅಧ್ಯಕ್ಷ ಧನಂಜಯ ಗೌಡ, ಉಮೇಶ ನಿಡ್ಡಾಜೆ, ವಿಶಾಲ್ ಹೆಗ್ಡೆ, ಸೆಬಿನ್, ಇನ್ನಿತರರು ಉಪಸ್ಥಿತರಿದ್ದರು.

Leave a Comment

error: Content is protected !!