ಗುರಿಪಳ್ಳ: ಸರಕಾರಿ ಉನ್ನತೀಕರಿಸಿದ ಹಿ.ಪ್ರ.ಶಾಲೆ ಗುರಿಪಳ್ಳದಲ್ಲಿ ಶಾಲಾ ಮಕ್ಕಳ ಪೋಷಕರಿಗಾಗಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿಶೇಷ ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿ ವಹಿಸಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತಾಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರಾಷ್ಟ್ರಪ್ರಶಸ್ತಿ ವಿಜೇತ ಮುಖ್ಯಶಿಕ್ಷಕ ಎಡ್ವರ್ಡ್ ಡಿಸೋಜ ರವರು ಮಾತನಾಡಿ ಸರಕಾರಿ ಶಾಲೆ ನಮಗೆ ಯಾಕೆ ಬೇಕು ಯಾವ ರೀತಿಯಾಗಿ ಸರಕಾರಿ ಶಾಲೆಯನ್ನು ಉಳಿಸಬಹುದು ಎಂಬ ವಿಚಾರದಲ್ಲಿ ಅಧ್ಬುತವಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಗುರುವಾಯನಕೆರೆ ಕ್ಲಸ್ಟರ್ ಸಿಆರ್ ಪಿ ರಾಜೇಶ್ ರವರು ಮಾತನಾಡಿ ಶಾಲೆ ಬೆಳೆಯಬೇಕಾದರೆ ಊರವರು ಹಾಗೂ ಇಲಾಖೆ ಜೊತೆಗೂಡಿ ಕೆಲಸ ಮಾಡಬೇಕು ಇದು ನಮ್ಮ ಶಾಲೆ ಅನ್ನುವ ಪ್ರೀತಿ ಎಲ್ಲರಿಗೂ ಇರಬೇಕು ಎಂದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕರಾದ ಸಿದ್ಧಲಿಂಗ ಸ್ವಾಮಿ ರವರು ಶಿಕ್ಷಕರ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸೀತಾ ಆರ್ ಶೇಟ್ ರವರು ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೋಷಕರ ಹಾಗೂ ಸಮುದಾಯದ ಪಾತ್ರದ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಶಾಲಾ ಸ್ಥಳದಾನಿಗಳಾದ ಪಾಂಡುರಂಗ ಮರಾಠೆ, ಎಸ್ ಡಿ ಎಮ್ ಸಿ ಅಧ್ಯಕ್ಷೆ ಶ್ರೀಮತಿ ಸವಿತಾ, ಮಾಜಿ ಅಧ್ಯಕ್ಷರಾದ ರಮಾನಂದ ಶರ್ಮಾ, ಪಂಚಾಯತ್ ಸದಸ್ಯೆ ವಿನುತಾ, ಪೋಷಕರು, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.