ರಾಜ್ಯದ ಆರ್ಥಿಕ ಸ್ಥಿತಿ ಚರ್ಚೆಗೆ ಮುಖ್ಯಮಂತ್ರಿಗಳು ಕೂಡಲೇ ಅಧಿವೇಶನ ಕರೆದು ಶ್ವೇತಪತ್ರವನ್ನು ಮಂಡಿಸಲಿ :
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಒತ್ತಾಯ
ಬೆಳ್ತಂಗಡಿ: ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಮುಂದಾಲೋಚನೆ ಮಾಡದೆ, ಅಧಿಕಾರಕ್ಕೆ ಬರಲೇ ಬೇಕು ಎಂಬ ಏಕೈಕ ಉದ್ದೇಶದಿಂದ ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅವೈಜ್ಞಾನಿವಾಗಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ, ಈಗ ಪೆಟ್ರೋಲ್, ಡಿಸೀಲ್, ವಿದ್ಯುತ್, ಮುದ್ರಾಂಕ ಸೇರಿದಂತೆ ವಿವಿಧ ವಸ್ತುಗಳಿಗೆ ಬೆಲೆ ಏರಿಕೆ ಮಾಡಿದ್ದು, ರಾಜ್ಯದ ಜನರಿಗೆ ಬರೆ ಎಳೆಯುತ್ತಿದೆ. ಉಚಿತ ಗ್ಯಾರಂಟಿಯ ಹೊರೆಯನ್ನು ಭರಿಸಲು ಸಾಧ್ಯವಾಗದೆ ಸರಕಾರ ದಿವಾಳಿ ಅಂಚಿಗೆ ತಲುಪಿದೆ ಎಂದು ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಆರೋಪಸಿದರು.
ಅವರು ಜೂ.18ರಂದು ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 15 ಬಜೆಟ್‌ನ್ನು ಮಂಡಿಸಿದ ಸ್ವಯಂ ಘೋಷಿತ ಆರ್ಥಿಕ ತಜ್ಞ ಎಂದು ಬಿಂಬಿಸುಕೊಳ್ಳುತ್ತಿರುವ ಸಿದ್ಧರಾಮಯ್ಯ ಅವರು ಗ್ಯಾರಂಟಿಗೆ ಬಜೇಟ್‌ನಲ್ಲಿ 60 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ, ರಾಜ್ಯದ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದು ಹೇಳುತ್ತಾರೆ. ಆದರೆ ಈಗ ಮುದ್ರಾಂಕ, ವಿದ್ಯುತ್, ಪೆಟ್ರೋಲ್, ಡಿಸೀಲ್, ಅಬಕಾರಿ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಎಂ.ಬಿ ಪಾಟೀಲ್, ಬೆಲೆ ಏರಿಕೆ ಗ್ಯಾರಂಟಿಗಾಗಿ ಹಣ ಹೊಂದಿಸಿಕೊಳ್ಳಲು ಎನ್ನುತ್ತಾರೆ. ಸಚಿವರ ಮಾತು ಪ್ರತಿಪಕ್ಷದ ಸಂಶಯಕ್ಕೆ ಪುಷ್ಟಿ ನೀಡಿದೆ. ಜನರ ಮನಸ್ಸಿನಲ್ಲೂ ಈ ಪ್ರಶ್ನೆ ಎದ್ದಿದೆ. ಇದಕ್ಕಾಗಿ ರಾಜ್ಯದ ಆರ್ಥಿಕ ಸ್ಥಿತಿ ಚರ್ಚೆಗೆ ಮುಖ್ಯಮಂತ್ರಿಗಳು ಕೂಡಲೇ ಅಧಿವೇಶನ ಕರೆಯಬೇಕು, ಶ್ವೇತಪತ್ರವನ್ನು ಮಂಡಿಸಬೇಕು ಎಂದು ಪ್ರತಿ ಪಕ್ಷ ಬಿಜೆಪಿ ಆಗ್ರಹಿಸುತ್ತದೆ ಎಂದು ಹೇಳಿದರು.
ರಾಜ್ಯದ ಪ್ರವಾಸೋಧ್ಯಮ ಸಚಿವರು ಗ್ಯಾರಂಟಿಯಿಂದ ರೂ.4,200 ಕೋಟಿ ಬಂಡಾವಳ ಹೆಚ್ಚಿದೆ ಎಂದು ಹೇಳುತ್ತಾರೆ. ಸಾರಿಗೆ ಸಚಿವರು ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಎನ್ನುತ್ತಾರೆ. ಆದರೆ ರಾಜ್ಯ ಸರಕಾರ ವಸ್ತುಗಳ ಬೆಲೆ ಏರಿಕೆ ಯಾಕೆ ಮಾಡಿದೆ ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದ್ದು, ಇವರು ಹೇಳುವುದೆಲ್ಲ ಅಪ್ಪಟ ಸುಳ್ಳು ಎಂಬುದು ಈಗ ಮನವರಿಕೆಯಾಗಿದೆ. ಕಳೆದ ವಿಧಾನ ಸಭಾ ಚುನಾವಣಾ ವೇಳೆ ಗ್ಯಾರಂಟಿ ಯೋಜನೆಯ ಮೂರ‍್ನಾಕು ತಿಂಗಳ ಹಣವನ್ನು ಒಮ್ಮೆಲೇ ಮಹಿಳೆಯರ ಏಕೌಂಟ್‌ಗೆ ಹಾಕಿದರು. ಚುನಾವಣೆ ಬಳಿಕ ಇದುವರೆಗೆ ಗ್ಯಾರಂಟಿಯ ಎರಡು ಸಾವಿರ ಹಣ ಬಂದಿಲ್ಲ, ಸಿದ್ಧರಾಮಯ್ಯ ಸರಕಾರಕ್ಕೆ ನಾಚಿಕೆಯಾಗಬೇಕು, ನಿಮ್ಮ ಆರ್ಥಿಕ ತಜ್ಞತೆಯನ್ನು ನೀವು ರಾಜ್ಯದ ಜನರ ರಕ್ತ ಹೀರುವುದಕ್ಕೆ ಬಳಕೆ ಮಾಡುತ್ತಿದ್ದೀರಿ ಎಂದು ಆರೋಪಿಸಿ, ರಾಜ್ಯದಲ್ಲಿ ಅಭಿವೃದ್ಧಿ ಎಲ್ಲಿದೆ ಎಂದು ಪ್ರತಾಪಸಿಂಹ ನಾಯಕ್ ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಾಗ ಪ್ರತಿ ಬಾರಿಯೂ ರಾಷ್ಟ್ರ ಚಿಂತನೆ ನಡೆಸಿ, ಜನರು ಮತದಾನ ಮಾಡುತ್ತಾರೆ. ಆದರೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ, ಗ್ಯಾರಂಟಿಯನ್ನು ಜನರು ಒಪ್ಪಿಲ್ಲ ಎಂಬ ಸಿಟ್ಟು ಮತ್ತು ದ್ವೇಷದಲ್ಲಿ ಈಗ ಕಾಂಗ್ರೆಸ್ ಸರಕಾರ ಜನರ ಮೇಲೆ ಬೆಲೆ ಏರಿಕೆ ಮೂಲಕ ಸೇಡು ತೀರಿಸಿಕೊಳ್ಳಲು ಹೊರಟಿದೆ. ಹಾಲಿನ ಪ್ರೋತ್ಸಾಹ ಧನ ರೂ.1087 ಕೋಟಿ ಬಿಡುಗಡೆಯಾಗಿಲ್ಲ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಇವರಿಗೆ ಸಾಧ್ಯವಾಗಿಲ್ಲ, ಶ್ರೀ ನಾರಾಯಣಗುರು ನಿಗಮಕ್ಕೆ 500 ಕೋಟಿ ಕೊಡುತ್ತೇವೆ ಎಂದು ಹೇಳಿದ್ದು, ಒಂದು ಕಂತಿನ ಹಣವನ್ನು ಕೊಟ್ಟಿಲ್ಲ, ಸರಕಾರಿ ನೌಕರರ 7ನೇ ವೇತನ ಆಯೋಗದಂತೆ ಅವರಿಗೆ ಸೌಲಭ್ಯ ಕೊಡುವ ಸ್ಥಿತಿಯಲಿಲ್ಲ, ಆಶಾ, ಅಂಗನವಾಡಿ ಕಾರ್ಯಕರ್ತೆಯ ವೇತನ ಜಾಸ್ತಿ ಮಾಡುತ್ತೇವೆ ಎಂದವರು ಇನ್ನೂ ಮಾಡಿಲ್ಲ, ನೀರಾವರಿ ಯೋಜನೆಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ, ಎಸ್.ಸಿ, ಎಸ್.ಟಿಯವರಿಗೆ ಮೀಸಲಾದ ರೂ.25 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿ, ಅವರಿಗೆ ಅನ್ಯಾಯ, ವಂಚನೆ ಮಾಡಲಾಗಿದೆ. ವಾಲ್ಮೀಕಿ ನಿಗಮದ ಹಣ ಆಂಧ್ರ, ತೆಲಂಗಾಣಕ್ಕೆ ಬೇನಾಮಿ ಏಕೌಂಟ್‌ಗೆ ಹೋಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ ಎಂದು ಅಪಾದಿಸಿದರು.
ರಾಜ್ಯದಲ್ಲಿ ಶಾಸಕರಿಗೆ ಬರಬೇಕಾದ ಪ್ರದೇಶಾಭಿವೃದ್ಧಿ ನಿಧಿ ರೂ. 50 ಲಕ್ಷ ಬಂದಿಲ್ಲ, ಈ ವರ್ಷದ ಪ್ರಥಮ ಕಂತು ಈಗಾಗಲೇ ಬರಬೇಕಿತ್ತು, ಅದೂ ಸಹ ಬಂದಿಲ್ಲ, ರಾಜ್ಯದ ಕಾಂಗ್ರೆಸ್ ಸರಕಾರ ದಿವಾಳಿ ಅಂಚಿಗೆ ತಲುಪಿದ್ದು, ಈಗ ರಾಜ್ಯ ಸರಕಾರ ಆದಾಯ ಹೆಚ್ಚಿಸಲು ವಿವಿಧ ಕಸರತ್ತು ನಡೆಸಲು ಮುಂದಾಗಿದೆ. ಇದರ ಭಾಗವಾಗಿ ಈಗ ಬೊಸ್ಟನ್ ಕಸ್ಟ್ರಕ್ಷನ್ ಗ್ರೂಪ್ ಎಂದ ಸಂಸ್ಥೆಗೆ 25 ಸಾವಿರ ಎಕ್ರೆ ಸಾರ್ವಜನಿಕ ಆಸ್ತಿಯನ್ನು ರಿಯಲ್ ಎಸ್ಟೇಟ್‌ಗೆ ಕೊಡುವ ಹುನ್ನಾರ ನಡೆಯುತ್ತಿದೆ. ಸರಕಾರದ ಇಂತಹ ಜನವಿರೋಧಿ ನೀತಿಯ ವಿರುದ್ಧ ಪ್ರತಿಪಕ್ಷವಾಗಿ ಬಿಜೆಪಿ ರಾಜ್ಯದ 224 ಕ್ಷೇತ್ರಗಳಲ್ಲೂ ರಸ್ತೆ ತಡೆ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ ಮತ್ತು ಜಯಾನಂದ ಗೌಡ ಪ್ರಜ್ವಲ್, ರಾಜ್ಯಕಾರ್ಯಕಾರಿಣಿ ಸದಸ್ಯ ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು.