31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬಡವರ ಅಭಿವೃದ್ಧಿಗಾಗಿ ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆಯ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರ: ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರ್.ಬಿ.ಐ.ನ ನಿಯಮದಂತೆ ದೇಶದ ಪ್ರಮುಖ ರಾಷ್ಟ್ರೀಕೃತ ಹಾಗೂ ಅನುಸೂಚಿತ ಬ್ಯಾಂಕ್‌ಗಳಿಗೆ ಸಾಂಸ್ಥಿಕ ಬಿ.ಸಿ.ಯಾಗಿ ಸೇವೆಸಲ್ಲಿಸುತ್ತಿದೆ. ದೇಶದಲ್ಲೇ ಅತಿ ದೊಡ್ಡ ಸ್ವಸಹಾಯ ಸಂಘ ಆರ್ಥಿಕ ಸೇರ್ಪಡೆಯನ್ನು ನಿರ್ವಹಿಸುವ ಸಂಸ್ಥೆಯಾಗಿ ಗ್ರಾಮಾಭಿವೃದ್ಧಿ ಯೋಜನೆಯು ಗುರುತಿಸಿಕೊಂಡಿದೆ. ಬ್ಯಾಂಕ್‌ಗಳಿಂದ ಸ್ವಸಹಾಯ ಸಂಘಗಳಿಗೆ ನೇರವಾಗಿ ಸಾಲ ಸೌಲಭ್ಯವನ್ನು ನೀಡುತ್ತಿರುವುದರಿಂದ ಶೇ. 13.5 ಬಡ್ಡಿದರದಲ್ಲಿ ಒಂದು ಸಂಘಕ್ಕೆ ಗರಿಷ್ಠ ರೂ. 25 ಲಕ್ಷದವರೆಗೆ ಸಾಲ ದೊರೆಯುತ್ತಿರುವುದು ದೇಶದಲ್ಲೇ ಒಂದು ಮಾದರಿ ಬಿ.ಸಿ. ವ್ಯವಸ್ಥೆಯಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳಲ್ಲಿ 46,972 ಸ್ವಸಹಾಯ ಸಂಘಗಳಿದ್ದು ರೂ. 2761 ಕೋಟಿ ಮೊತ್ತದ ಹೊರಬಾಕಿ ಇರುತ್ತದೆ. ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಅವಧಿಯ ಸ್ವಸಹಾಯ ಸಂಘಗಳು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿವೆ. ಈ ಸಂಘಗಳು ಅತ್ಯುತ್ತಮವಾಗಿ ತಮ್ಮ ಸಂಘಗಳ ಗುಣಮಟ್ಟವನ್ನು ಕಾಯ್ದುಕೊಂಡ ಕಾರಣ ಸದಸ್ಯರ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಯೂ ಆಗಿರುತ್ತದೆ. ಕಿರು ಆರ್ಥಿಕ ಸಾಲ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆಯಲ್ಲಿರುವ ಉಳಿದ ಎಲ್ಲಾ ಸಂಸ್ಥೆಗಳು ಲಾಭದಾಯಕ ಉದ್ದೇಶಿತ ಸಂಸ್ಥೆಗಳಾಗಿದ್ದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನೋಂದಾಯಿತವಾದ ಸಂಸ್ಥೆಯಾಗಿದೆ. ಯೋಜನೆ ಬ್ಯಾಂಕ್‌ನಿಂದ ಗ್ರಾಮೀಣ ಜನತೆಗೆ ಆರ್ಥಿಕ ಸಾಲ ಸೌಲಭ್ಯವನ್ನು ಸ್ವಸಹಾಯ ಸಂಘಗಳ ಮಾದರಿಯಲ್ಲಿ ನೀಡುತ್ತಿರುವುದು ವಿಶೇಷವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯು ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ಲಾಭ ಉದ್ದೇಶಿತ ಸಂಸ್ಥೆ ಆಗಿಲ್ಲ. ಬದಲಾಗಿ ತನ್ನ ಆದಾಯದಲ್ಲಿ ಮಿಗತೆ ಬಂದರೆ ಅದನ್ನು ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅರ್ಪಿಸುತ್ತಿದೆ.


ಪ್ರಸ್ತುತ ವರ್ಷದಲ್ಲಿ ಪ್ರತಿ ತಿಂಗಳು 40 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು, 17 ಸಾವಿರ ವೃದ್ಧಾಪ್ಯ ಕಡುಬಡವರಿಗೆ ಪ್ರತಿ ತಿಂಗಳು ಮಾಸಾಶನವನ್ನು ನೀಡುತ್ತಿದೆ. ಈ ವರ್ಷ ಒಂದು ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳ ಶಿಕ್ಷಕರ ಕೊರತೆಯನ್ನು ತುಂಬಿದೆ. ಕೆರೆ ಪುನರ್‌ಜ್ಜೀವನ, ವಾತ್ಸಲ್ಯ ಕಾರ್ಯಕ್ರಮ, ಶುದ್ಧಗಂಗಾ, ಹಿಂದೂ ರುದ್ರಭೂಮಿ ಯೋಜನೆ, ಶಾಲೆಗಳಿಗೆ ಪೀಠೋಪಕರಣ ಒದಗಣೆ, ಭಜನಾ ಮಂಡಳಿಗಳಿಗೆ, ಮದ್ಯವರ್ಜನ ಶಿಬಿರ, ವಿಕಲ ಚೇತನರಿಗೆ, ವೃದ್ಧರಿಗೆ ಸಲಕರಣೆ, ಪ್ರಾಕೃತಿಕ ವಿಕೋಪಗಳಿಗೆ ಧನಸಹಾಯ, ಕೃಷಿ ಅನುದಾನ ಕಾರ್ಯಕ್ರಮ, ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಸಹಕಾರ ನೀಡುವ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷ ರೀತಿಯಲ್ಲಿ ಸಾಮಾಜ ಸೇವೆಯನ್ನು ಸಲ್ಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಪ್ರಗತಿರಕ್ಷಾ ಕವಚ ಮತ್ತು ಸುರಕ್ಷಾ ವಿಮಾ ಯೋಜನೆಗಳ ಮೂಲಕ ಬಡವರಿಗೆ ಜೀವವಿಮೆ ಭದ್ರತೆ ಹಾಗೂ ಆರೋಗ್ಯ ವಿಮಾ ಭದ್ರತೆಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗೆ ಗ್ರಾಮೀಣ ಕರ್ನಾಟಕದ ರೈತರ, ಬಡವರ, ಮಹಿಳೆಯರ ಕಲ್ಪವೃಕ್ಷವಾಗಿ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿದೆ.


ಕೆಲವು ತಿಂಗಳುಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ಸಾಲವನ್ನು ಯಾರೂ ಕಟ್ಟಬೇಡಿ, ಲೈಸೆನ್ಸ್ ಇಲ್ಲದೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಇತ್ಯಾದಿ ಸುಳ್ಳು ಸುದ್ದಿಗಳನ್ನು ಗ್ರಾಮೀಣ ಮುಗ್ಧ ಜನತೆಗೆ ಕೆಲವು ಸಮಾಜಘಾತುಕ ಶಕ್ತಿಗಳು ಮಾಡುತ್ತಿದ್ದಾರೆ. ಇವುಗಳಿಂದ ಕರಾವಳಿ ಪ್ರದೇಶದ ಸಜ್ಜನರು ತೀವ್ರ ನೊಂದಿದ್ದಾರೆ. ಸಮಾಜಘಾತುಕ ಶಕ್ತಿಗಳ ಅಪಪ್ರಚಾರದ ಬಗ್ಗೆ ಸಂಘದ ಸದಸ್ಯರು, ಸಾರ್ವಜನಿಕರು ಈಗಾಗಾಲೇ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರನ್ನು ದಾಖಲಿಸಿದ್ದಾರೆ. ಅಪಪ್ರಚಾರ ಮಾಡುತ್ತಿದ್ದ ಒಂದು ವ್ಯವಸ್ಥಿತ ಗುಂಪನ್ನು ಪಡುಬಿದ್ರೆಯ ಯೆಲ್ಲೂರಿನ ಜನತೆ ಪೊಲೀಸರಿಗೆ ಒಪ್ಪಿಸಿದ್ದು ಇತ್ತೀಚೆಗೆ ವರದಿಯಾಗಿದೆ.


ರಾಷ್ಟ್ರೀಕೃತ ಬ್ಯಾಂಕ್‌ಗಳು ದೇಶದ ಆರ್ಥಿಕ ಕಣ್ಣುಗಳು. ಉಭಯ ಕರಾವಳಿ ಜಿಲ್ಲೆಯ ಸ್ವಸಹಾಯ ಸಂಘಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾದಿಂದ ಯೋಜನೆಯ ಮೂಲಕ ಬಿ.ಸಿ. ಮಾದರಿಯಲ್ಲಿ ಸಾಲ ದೊರೆಯುತ್ತಿದ್ದು ಇಂತಹ ಸಾಲಗಳನ್ನು ಕಟ್ಟಬೇಡಿ ಎಂದು ಪ್ರಚೋದನೆ ನೀಡುವುದು ಒಂದು ದೇಶದ್ರೋಹದ ಮತ್ತು ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುವ ಕೃತ್ಯವಾಗಿದೆ ಎಂದು ಜನರು ಖಂಡಿಸಿದ್ದಾರೆ.


ಬಡವರ ಅಭಿವೃದ್ಧಿಗಾಗಿ ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಎಂಬ ವ್ಯವಸ್ಥೆಯನ್ನು ಹಾಳು ಮಾಡುವ ಯಾವುದೇ ಹುನ್ನಾರ, ಪ್ರಯತ್ನಗಳಿಗೆ ಅವಕಾಶ ಮಾಡಿಕೊಡಬಾರದು. ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಸಜ್ಜನ ನಾಗರೀಕರು, ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು, ಎಸ್.ಬಿ.ಐ. ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು, ಜಿಲ್ಲಾಧಿಕಾರಿಯವರ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

Related posts

ಓಡಿಲ್ನಾಳ: ಕೋರ್ಯಾರು ರಸ್ತೆಯಲ್ಲಿ ವಿದ್ಯುತ್ ಲೈನ್ ಗೆ ಬಿದ್ದ ಮರ

Suddi Udaya

ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಂಬೇಡ್ಕರ್ ದಿನಾಚರಣೆ

Suddi Udaya

ಡಿ.5 : ಬೆಳ್ತಂಗಡಿ ಹಾಗೂ ಧರ್ಮಸ್ಥಳ ವಿದ್ಯುತ್ ಉಪಕೇಂದ್ರದ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ನಿಡ್ಲೆ: 24 ನೇ ವರ್ಷದ ಕರುಂಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya

ಬಿಜೆಪಿ ಮಹಿಳಾ ಮೋರ್ಚಾದಿಂದ ಉಜಿರೆಯಲ್ಲಿ ದ್ವಿಚಕ್ರ ವಾಹನ ರ್‍ಯಾಲಿ :

Suddi Udaya

ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಕನ್ಯಾಡಿ ಬಿ ಸುಬ್ರಹ್ಮಣ್ಯ ರಾವ್ ನಿಧನ

Suddi Udaya
error: Content is protected !!