ಉಜಿರೆ: ಉಜಿರೆಯ ರುಡ್‌ಸೆಟ್ ಸಂಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಸಂಸ್ಥೆಯಲ್ಲಿ ನಡೆಯುತ್ತಿರುವ ಎರಡು ತರಬೇತಿ ತಂಡಗಳ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡುತ್ತಾ ರುಡ್‌ಸೆಟ್ ಸಂಸ್ಥೆಗಳ ತರಬೇತಿಯಲ್ಲಿ ಪ್ರಯೋಗಿಕ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದರಿಂದ ಶಿಬಿರಾರ್ಥಿಗಳಿಗೆ ಹೆಚ್ಚು ಕೌಶಲ್ಯ ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು. ಇದರಿಂದ ಸ್ವಂತ ಉದ್ಯೋಗ ಪ್ರಾರಂಭಿಸಲು ಅನುಕೂಲವಾಗುತ್ತದೆ, ಇಲ್ಲಿನ ತರಬೇತಿ ಪಡೆದ ನಂತರವೂ ಹೊಸ ಹೊಸ ತಂತ್ರಜ್ಞಾನಗಳನ್ನು ನವೀಕರಿಸಿಕೊಳ್ಳಿ, ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ ಹಾಗೂ ಉದ್ಯಮಿಗಳು ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಂಡಾಗ ಲಾಭ ನಷ್ಟಗಳ ವಿವರ ದೊರೆಯುತ್ತದೆ ಎಂದು ಹೇಳಿದರು. ತರಬೇತಿ ಪಡೆದ ಎಲ್ಲರಿಗೂ ಶುಭ ಹಾರೈಸಿ ಆರ್ಶೀವದಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಛೇರಿಯ ಸಹಾಯಕ ಮಾಹಾ ಪ್ರಬಂಧಕ ರಂಜನ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ಎನ್. ಜರ್ನಾಧನ್, ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಜಯ ಕುಮಾರ ಬಿ.ಪಿ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಮ್. ಸುರೇಶ್ ರವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಅವರು ವಂದಿಸಿದರು. ತರಬೇತಿಯಲ್ಲಿ ಒಟ್ಟು 65 ಜನ ಅಭ್ಯರ್ಥಿಗಳನ್ನು ಭಾಗವಹಿಸಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.