ಉಜಿರೆ: ನಮ್ಮ ಅಂತರಂಗದ ಸಾಮರ್ಥ್ಯವನ್ನು ಅನಾವರಣ ಮಾಡುವುದೇ ನಿಜವಾದ ಶಿಕ್ಷಣ. ವಿದ್ಯಾರ್ಥಿಗಳು ಓದುವುದು , ಬರೆಯುವುದು , ಕೇಳುವುದು ಮಾತ್ರವಲ್ಲದೆ ಸರಿಯಾಗಿ ಅಧ್ಯಯನ ಮಾಡಬೇಕು. ಇದರೊಂದಿಗೆ ಜ್ಞಾನವನ್ನು ಸಂಪಾದಿಸಬೇಕು. ಸಂಸ್ಕೃತವು ಅಂತಹ ಜ್ಞಾನ ಭಂಡಾರವಾಗಿದ್ದು ಮಾತ್ರವಲ್ಲದೆ ವೈಜ್ಞಾನಿಕ ಭಾಷೆ ಕೂಡ ಆಗಿದೆ. ಇದನ್ನು ತಿಳಿದರೆ ಉಳಿದ ಭಾಷೆಗಳನ್ನು ಸುಲಭವಾಗಿ ಅರಿಯಬಹುದು. ಇದರ ಸ್ವಾರಸ್ಯ ತಿಳಿದು ಸುಸಂಸ್ಕೃತರಾಗಿ. ಭಾಷಾ ಅಧ್ಯಯನದಿಂದ ಮೌಲ್ಯದೊಂದಿಗೆ ಉತ್ತಮ ಚಾರಿತ್ರ್ಯ ಸಂಪಾದಿಸಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ಕಲಾ ವಿಭಾಗದ ಡೀನ್ ಡಾ. ಶ್ರೀಧರ ಭಟ್ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಪದಾಧಿಕಾರಿಗಳ ಪದಪ್ರದಾನ ಮಾಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಾಕ್ಷಿಕ ಸಂಸ್ಕೃತ ಡಿಜಿಟಲ್ ಪತ್ರಿಕೆಯನ್ನು ಹಾಗೂ ಪದಾಧಿಕಾರಿಗಳ ನಾಮಫಲಕವನ್ನು ಡಾ.ಶ್ರೀಧರ ಭಟ್ ಅವರು ಅನಾವರಣಗೊಳಿಸಿದರು. ಹಂಸಿನಿ ಭಿಡೆ ಹಾಗೂ ಬಳಗದಿಂದ ಸಂಸ್ಕೃತ ಗೀತಗಾಯನ ನಡೆಯಿತು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಪೃಥ್ವಿ ಹೆಗಡೆ ಪರಿಚಯಿಸಿ , ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ ವಂದಿಸಿದರು. ಉಪಾಧ್ಯಕ್ಷೆ ವೈಷ್ಣವಿ ಭಟ್ ನಿರೂಪಿಸಿದರು.