25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಶೇಷ ಚೇತನರ ಬಾಳಿಗೆ ಬೆಳಕಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮ: 8,768 ವಿವಿಧ ಉಚಿತ ಸಲಕರಣೆ ವಿತರಣೆ

ಧರ್ಮಸ್ಥಳ: ವಿಶೇಷ ಚೇತನರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿವಿಧ ಸಲಕರಣೆಗಳನ್ನು ನೀಡಲಾಗುತ್ತದೆ. ಇದರಂತೆ 2023-24ರ ಸಾಲಿನಲ್ಲಿ 8,768 ವಿವಿಧ ಉಚಿತ ಸಲಕರಣೆಗಳನ್ನು ವಿತರಿಸಲಾಗಿದೆಯೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್.ರವರು ತಿಳಿಸಿದರು.


ರಾಜ್ಯದಲ್ಲಿ ಸುಮಾರು 13.24 ಲಕ್ಷ ವಿಶೇಷ ಚೇತನರಿದ್ದಾರೆಯೆಂಬ ಮಾಹಿತಿಯಿದೆ. ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವಿಕಲತೆ ಸಮಸ್ಯೆಗಳು ಬಂದರೆ ಇನ್ನು ಕೆಲವರಿಗೆ ದುರದೃಷ್ಟವಶಾತ್ ಅಪಘಾತಗಳು, ಮಾರಕರೋಗಗಳಿಂದ ಬರುತ್ತವೆ. ಗಂಭೀರ ಸಮಸ್ಯೆಯಿರುವ ವಿಶೇಷ ಚೇತನರ ಪಾಲನೆ ಪೋಷಣೆ, ಅತ್ಯಂತ ಕಷ್ಟಕರವಾದುದು. ಇವರ ಯೋಗಕ್ಷೇಮ ನೋಡುವುದಕ್ಕಾಗಿಯೇ ಮನೆಯಲ್ಲಿ ಒಂದೆರಡು ಮಂದಿ ಇರಬೇಕಾಗಿದೆ. ನಿತ್ಯ ಕೂಲಿ ಮಾಡಿ ಬದುಕುವ ಎಷ್ಟೋ ಕುಟುಂಬಗಳು ಇದರಿಂದಾಗಿ ಆರ್ಥಿಕ ಸಂಕಷ್ಟವನ್ನೆದುರಿಸುವುದಲ್ಲದೇ ಮಾನಸಿಕವಾಗಿಯೂ ನೊಂದಿರುತ್ತಾರೆ. ಮುಖ್ಯವಾಗಿ ಸ್ನಾನ, ಶೌಚ ಊಟೋಪಚಾರಗಳನ್ನು ಸ್ವಯಂ ಮಾಡಿಕೊಳ್ಳಲು ಸಾಧ್ಯವಾಗದ, ಎಷ್ಟೋ ಮಂದಿ ಇತರರ ಅವಲಂಬನೆಯಲ್ಲಿ ಬದುಕಬೇಕಿದೆ. ಮನೆಯಿಂದ ಹೊರಹೋಗಲಾರದೆ, ಮಲಗಿದಲ್ಲೇ ಇರುವ ವಿಶೇಷ ಚೇತನರ ಬದುಕಂತೂ ಅತ್ಯಂತ ಶೋಚನೀಯವಾಗಿರುತ್ತದೆ. ಶೌಚ ಇತ್ಯಾದಿಗಳಿಗೆ ಹೋಗಲು ತೊಂದರೆಯಾಗುತ್ತದೆಯೆಂದು ಎಷ್ಟೋ ವಿಶೇಷ ಚೇತನರು ಕಡಿಮೆ ನೀರು, ಆಹಾರ ತೆಗೆದುಕೊಳ್ಳುವುದೂ ಇದೆ. ಅಂಗವಿಕಲತೆ ಶಾಪವಲ್ಲ, ಅವರಿಗೆ ಅನುಕಂಪಕ್ಕಿಂತ ಕನಿಷ್ಠ ಸೌಲಭ್ಯವನ್ನಾದರು ಒದಗಿಸಿ ಇತರರಂತೆ ಬಾಳಲು ಅವಕಾಶ ಕಲ್ಪಿಸುವುದು ಸಮಾಜದ ಜವಾಬ್ದಾರಿ. ಈ ನಿಟ್ಟಿನಲ್ಲಿ ಅವರಲ್ಲಿ ಮನೋಸ್ಥೈರ್ಯ ತುಂಬುವ ಜೊತೆಗೆ ಸುಲಭವಾಗಿ ತಮ್ಮ ದೈನಂದಿನ ಜೀವನ ನಡೆಸುವ ಧ್ಯೇಯೋದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಇವರಿಗಾಗಿಯೇ ವಿವಿಧ ಉಚಿತ ಸಲಕರಣೆಗಳನ್ನು ನೀಡುವ ಜನಮಂಗಲ ಕಾರ್ಯಕ್ರಮವನ್ನು ಜಾರಿಗೆ ತಂದರು.

ಜನಮಂಗಲ ಕಾರ್ಯಕ್ರಮದಲ್ಲಿ ಹಾಸಿಗೆಯಲ್ಲಿಯೇ ದೀರ್ಘಕಾಲ ಮಲಗಿದವರಿಗೆ ಹುಣ್ಣು (ಬೆಡ್ ಸೋರ್) ಆಗದಂತೆ ನೀರಹಾಸಿಗೆ (ವಾಟರ್ ಬೆಡ್), ನಡೆದಾಡಲು ಸಾಧ್ಯವಿಲ್ಲದವರಿಗೆ ಹೊರಗಡೆ ಓಡಾಡಲು ಗಾಲಿಕುರ್ಚಿ (ವೀಲ್ ಚಯರ್) ಮತ್ತು ಹಾಸಿಗೆ ಹಿಡಿದ ರೋಗಿಗಳಿಗೆ ಸ್ನಾನಕ್ಕೆ, ಶೌಚಕ್ಕೆ ಹೋಗಲು ಗಾಲಿಕುರ್ಚಿ (ಕಮೋಡ್ ವೀಲ್ ಚಯರ್), ಅಪಘಾತಗಳಾಗಿ ವಿಕಲಾಂಗರಾಗಿ ಓಡಾಡುತ್ತಿರುವವರಿಗೆ ಕಂಕುಳಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಊರುಗೋಲು (ಆಕ್ಸಿಲರಿ ಕ್ರಚಸ್), ವಯಸ್ಕರಾಗಿದ್ದು ಸ್ಟ್ರೋಕ್, ಪ್ಯಾರಾಲಿಸಿಸ್ ಮುಂತಾದ ರೋಗಗಳಿಗೆ ತುತ್ತಾಗಿರುವವರಿಗೆ ನಡೆದಾಡಲು ಅನುಕೂಲವಾಗುವಂತೆ ನಡುಗೋಲು (ಯು ಶೇಪ್ ವಾಕರ್), ನಡೆದಾಡಲು ಕಷ್ಟವಾದವರಿಗೆ ಅನುಕೂಲವಾಗುವಂತೆ ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್) ಹಾಗೂ ಮೂರುಕಾಲಿನ ಕೈಗೋಲು (ತ್ರಿ ಲೆಗ್ ವಾಕಿಂಗ್ ಸ್ಟಿಕ್) ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಈ ಎಲ್ಲಾ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ವಿಶೇಷ ಚೇತನರ ಮನೆಬಾಗಿಲಿಗೇ ತಲುಪಿಸಲಾಗುತ್ತಿದೆಯಲ್ಲದೇ ಸಲಕರಣೆಗಳ ಬಳಕೆಯ ಕುರಿತಂತೆ ಸಂಸ್ಥೆಯ ಕಾರ್ಯಕರ್ತರು ವಿವರಿಸಿ ಮಾಹಿತಿ ನೀಡುತ್ತಾರೆ.

2023-24ನೇ ಸಾಲಿನಲ್ಲಿ ಸುಮಾರು 8,768 ಸಲಕರಣೆಗಳನ್ನು ವಿತರಿಸಿದ್ದು, ಇದುವರೆಗೆ ಯೋಜನೆಯಿಂದ ಒಟ್ಟು 28,008 ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗಿದೆ. ಈ ಸಲಕರಣೆಗಳಿಂದಾಗಿ ವಿಶೇಷ ಚೇತನರಿಗೆ ಉಪಯುಕ್ತವಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆಯೆಂದು ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್.ರವರು ತಿಳಿಸಿದರು.

Related posts

ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಜನಸ್ಪಂದನ ಸಭೆಯ ಫಲಶ್ರುತಿ 108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ

Suddi Udaya

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ಜಿ.ಕೆ ರಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

Suddi Udaya

ಟೀಮ್ ನವ ಭಾರತ್ ಬೆಳ್ತಂಗಡಿ ಆಶ್ರಯದಲ್ಲಿ ದಿವಂಗತ ತುಷಾರ್ ಕೆ ಇವರ ಸ್ಮರಣಾರ್ಥ ತಾಲೂಕು ಮಟ್ಟದ ಹೊನಲ ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ವೇಣೂರು: ಅಕ್ರಮ ಮರಳು ಸಾಗಟ: ರೂ.6 ಸಾವಿರ ಮೌಲ್ಯದ ಮರಳು ವಶಪಡಿಸಿಕೊಂಡ ವೇಣೂರು ಪೊಲೀಸರು

Suddi Udaya

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 13504 ಅಂತರದಿಂದ ಮುನ್ನಡೆ

Suddi Udaya
error: Content is protected !!