27.7 C
ಪುತ್ತೂರು, ಬೆಳ್ತಂಗಡಿ
November 28, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಶೇಷ ಚೇತನರ ಬಾಳಿಗೆ ಬೆಳಕಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮ: 8,768 ವಿವಿಧ ಉಚಿತ ಸಲಕರಣೆ ವಿತರಣೆ

ಧರ್ಮಸ್ಥಳ: ವಿಶೇಷ ಚೇತನರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿವಿಧ ಸಲಕರಣೆಗಳನ್ನು ನೀಡಲಾಗುತ್ತದೆ. ಇದರಂತೆ 2023-24ರ ಸಾಲಿನಲ್ಲಿ 8,768 ವಿವಿಧ ಉಚಿತ ಸಲಕರಣೆಗಳನ್ನು ವಿತರಿಸಲಾಗಿದೆಯೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್.ರವರು ತಿಳಿಸಿದರು.


ರಾಜ್ಯದಲ್ಲಿ ಸುಮಾರು 13.24 ಲಕ್ಷ ವಿಶೇಷ ಚೇತನರಿದ್ದಾರೆಯೆಂಬ ಮಾಹಿತಿಯಿದೆ. ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವಿಕಲತೆ ಸಮಸ್ಯೆಗಳು ಬಂದರೆ ಇನ್ನು ಕೆಲವರಿಗೆ ದುರದೃಷ್ಟವಶಾತ್ ಅಪಘಾತಗಳು, ಮಾರಕರೋಗಗಳಿಂದ ಬರುತ್ತವೆ. ಗಂಭೀರ ಸಮಸ್ಯೆಯಿರುವ ವಿಶೇಷ ಚೇತನರ ಪಾಲನೆ ಪೋಷಣೆ, ಅತ್ಯಂತ ಕಷ್ಟಕರವಾದುದು. ಇವರ ಯೋಗಕ್ಷೇಮ ನೋಡುವುದಕ್ಕಾಗಿಯೇ ಮನೆಯಲ್ಲಿ ಒಂದೆರಡು ಮಂದಿ ಇರಬೇಕಾಗಿದೆ. ನಿತ್ಯ ಕೂಲಿ ಮಾಡಿ ಬದುಕುವ ಎಷ್ಟೋ ಕುಟುಂಬಗಳು ಇದರಿಂದಾಗಿ ಆರ್ಥಿಕ ಸಂಕಷ್ಟವನ್ನೆದುರಿಸುವುದಲ್ಲದೇ ಮಾನಸಿಕವಾಗಿಯೂ ನೊಂದಿರುತ್ತಾರೆ. ಮುಖ್ಯವಾಗಿ ಸ್ನಾನ, ಶೌಚ ಊಟೋಪಚಾರಗಳನ್ನು ಸ್ವಯಂ ಮಾಡಿಕೊಳ್ಳಲು ಸಾಧ್ಯವಾಗದ, ಎಷ್ಟೋ ಮಂದಿ ಇತರರ ಅವಲಂಬನೆಯಲ್ಲಿ ಬದುಕಬೇಕಿದೆ. ಮನೆಯಿಂದ ಹೊರಹೋಗಲಾರದೆ, ಮಲಗಿದಲ್ಲೇ ಇರುವ ವಿಶೇಷ ಚೇತನರ ಬದುಕಂತೂ ಅತ್ಯಂತ ಶೋಚನೀಯವಾಗಿರುತ್ತದೆ. ಶೌಚ ಇತ್ಯಾದಿಗಳಿಗೆ ಹೋಗಲು ತೊಂದರೆಯಾಗುತ್ತದೆಯೆಂದು ಎಷ್ಟೋ ವಿಶೇಷ ಚೇತನರು ಕಡಿಮೆ ನೀರು, ಆಹಾರ ತೆಗೆದುಕೊಳ್ಳುವುದೂ ಇದೆ. ಅಂಗವಿಕಲತೆ ಶಾಪವಲ್ಲ, ಅವರಿಗೆ ಅನುಕಂಪಕ್ಕಿಂತ ಕನಿಷ್ಠ ಸೌಲಭ್ಯವನ್ನಾದರು ಒದಗಿಸಿ ಇತರರಂತೆ ಬಾಳಲು ಅವಕಾಶ ಕಲ್ಪಿಸುವುದು ಸಮಾಜದ ಜವಾಬ್ದಾರಿ. ಈ ನಿಟ್ಟಿನಲ್ಲಿ ಅವರಲ್ಲಿ ಮನೋಸ್ಥೈರ್ಯ ತುಂಬುವ ಜೊತೆಗೆ ಸುಲಭವಾಗಿ ತಮ್ಮ ದೈನಂದಿನ ಜೀವನ ನಡೆಸುವ ಧ್ಯೇಯೋದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಇವರಿಗಾಗಿಯೇ ವಿವಿಧ ಉಚಿತ ಸಲಕರಣೆಗಳನ್ನು ನೀಡುವ ಜನಮಂಗಲ ಕಾರ್ಯಕ್ರಮವನ್ನು ಜಾರಿಗೆ ತಂದರು.

ಜನಮಂಗಲ ಕಾರ್ಯಕ್ರಮದಲ್ಲಿ ಹಾಸಿಗೆಯಲ್ಲಿಯೇ ದೀರ್ಘಕಾಲ ಮಲಗಿದವರಿಗೆ ಹುಣ್ಣು (ಬೆಡ್ ಸೋರ್) ಆಗದಂತೆ ನೀರಹಾಸಿಗೆ (ವಾಟರ್ ಬೆಡ್), ನಡೆದಾಡಲು ಸಾಧ್ಯವಿಲ್ಲದವರಿಗೆ ಹೊರಗಡೆ ಓಡಾಡಲು ಗಾಲಿಕುರ್ಚಿ (ವೀಲ್ ಚಯರ್) ಮತ್ತು ಹಾಸಿಗೆ ಹಿಡಿದ ರೋಗಿಗಳಿಗೆ ಸ್ನಾನಕ್ಕೆ, ಶೌಚಕ್ಕೆ ಹೋಗಲು ಗಾಲಿಕುರ್ಚಿ (ಕಮೋಡ್ ವೀಲ್ ಚಯರ್), ಅಪಘಾತಗಳಾಗಿ ವಿಕಲಾಂಗರಾಗಿ ಓಡಾಡುತ್ತಿರುವವರಿಗೆ ಕಂಕುಳಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಊರುಗೋಲು (ಆಕ್ಸಿಲರಿ ಕ್ರಚಸ್), ವಯಸ್ಕರಾಗಿದ್ದು ಸ್ಟ್ರೋಕ್, ಪ್ಯಾರಾಲಿಸಿಸ್ ಮುಂತಾದ ರೋಗಗಳಿಗೆ ತುತ್ತಾಗಿರುವವರಿಗೆ ನಡೆದಾಡಲು ಅನುಕೂಲವಾಗುವಂತೆ ನಡುಗೋಲು (ಯು ಶೇಪ್ ವಾಕರ್), ನಡೆದಾಡಲು ಕಷ್ಟವಾದವರಿಗೆ ಅನುಕೂಲವಾಗುವಂತೆ ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್) ಹಾಗೂ ಮೂರುಕಾಲಿನ ಕೈಗೋಲು (ತ್ರಿ ಲೆಗ್ ವಾಕಿಂಗ್ ಸ್ಟಿಕ್) ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಈ ಎಲ್ಲಾ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ವಿಶೇಷ ಚೇತನರ ಮನೆಬಾಗಿಲಿಗೇ ತಲುಪಿಸಲಾಗುತ್ತಿದೆಯಲ್ಲದೇ ಸಲಕರಣೆಗಳ ಬಳಕೆಯ ಕುರಿತಂತೆ ಸಂಸ್ಥೆಯ ಕಾರ್ಯಕರ್ತರು ವಿವರಿಸಿ ಮಾಹಿತಿ ನೀಡುತ್ತಾರೆ.

2023-24ನೇ ಸಾಲಿನಲ್ಲಿ ಸುಮಾರು 8,768 ಸಲಕರಣೆಗಳನ್ನು ವಿತರಿಸಿದ್ದು, ಇದುವರೆಗೆ ಯೋಜನೆಯಿಂದ ಒಟ್ಟು 28,008 ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗಿದೆ. ಈ ಸಲಕರಣೆಗಳಿಂದಾಗಿ ವಿಶೇಷ ಚೇತನರಿಗೆ ಉಪಯುಕ್ತವಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆಯೆಂದು ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್.ರವರು ತಿಳಿಸಿದರು.

Related posts

ಎಸ್ ಡಿ ಯಂ ಪಾಲಿಟೆಕ್ನಿಕ್ – ಪ್ರಥಮ ಚಿಕಿತ್ಸೆ ತರಬೇತಿ

Suddi Udaya

ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೆಲ್ಕೋ ಇಂಡಿಯಾ ಫೌಂಡೇಶನ್ ವತಿಯಿಂದ ಸೌರ ವಿದ್ಯುತ್ ಘಟಕ ಹಸ್ತಾಂತರ

Suddi Udaya

ಕರಾಟೆ ಚಾಂಪಿಯನ್ ಶಿಪ್ : ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ

Suddi Udaya

ಅ.15 : ಚರ್ಚ್ ರೋಡ್ ಬಳಿ ನೂತನ ಶ್ರೀ ದುರ್ಗಾ ಬೆಂಗಳೂರು ಅಯ್ಯಂಗಾರ್ ಬೇಕರಿ ಶುಭಾರಂಭ

Suddi Udaya
error: Content is protected !!