ಉಜಿರೆ: ಇಲ್ಲಿನ ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನಲ್ಲಿ ಆಸಕ್ತ ಆಯ್ದ ವಿದ್ಯಾರ್ಥಿಗಳಿಗೆ ಕೆ.ಸಿ.ಇ.ಟಿ., ನೀಟ್ ಹಾಗೂ ಜೆಇಇ ಅಡ್ವಾನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ಕುಮಾರ್ ನಿಹಾರ್ ಎಸ್ ಆರ್ ಇವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಾಧಕ ನಿಹಾರ್ ಮಾತನಾಡಿ ತಾನು ಹೇಗೆ ಸ್ಪರ್ಧಾತ್ಮಕ ಹಾಗೂ ವಾರ್ಷಿಕ ಪರೀಕ್ಷೆಗಳೆರಡಕ್ಕೂ ತಯಾರು ಮಾಡಿಕೊಳ್ಳುತ್ತಿದ್ದೆ. ಯಾವ ರೀತಿ ನೋಟ್ಸ್ಗಳನ್ನು ತಯಾರಿಸಿಕೊಳ್ಳುತ್ತಿದ್ದೆ. ಕೆ ಸಿ.ಇ.ಟಿ.,ನೀಟ್ ಹಾಗೂ ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಕ್ರಮ,ಸಮಯ ನಿರ್ವಹಣೆ,ಓದಬೇಕಾದ ಪಠ್ಯ-ಪುಸ್ತಕ ಹಾಗೂ ಯಾವ ಯಾವ ಮುಖ್ಯಾಂಶಗಳು ಬಹಳ ಪ್ರಮುಖವಾಗಿರುತ್ತದೆ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಹೇಗೆ ಚುಟುಕು ಸಮಯದಲ್ಲಿ ಉತ್ತರಗಳನ್ನು ಶೀಘ್ರವಾಗಿ ಉತ್ತರಿಸಬೇಕು ಎಂಬಿತ್ಯಾದಿ ಉಪಯುಕ್ತವಾದ ಸಲಹೆ,ಮಾರ್ಗದರ್ಶನ ನೀಡಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನೇಕ ಸಂದೇಹ,ಪ್ರಶ್ನೆಗಳಿಗೂ ಸಹ ಉತ್ತರಿಸಿದರು.ನನ್ನ ಇಂದಿನ ಯಶಸ್ಸಿಗೆ ನಿರಂತರ ಹಾಗೂ ಕಠಿಣ ಪ್ರಯತ್ನವೇ ಕಾರಣವಾಗಿದೆ ,ನೀವೂ ನಿರಂತರ ಪ್ರಯತ್ನದಿಂದ ಯಶಸ್ಸನ್ನು ಸಾಧಿಸುವಂತಾಗಲಿ ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪರವಾಗಿ ಕುಮಾರ್ ನಿಹಾರ್ ಎಸ್ ಆರ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ ಮಾತನಾಡಿ ಯಶಸ್ಸು ಕೇವಲ ಒಂದು ದಿನದಿಂದ ಸಿಗುವಂತಹದಲ್ಲ. ನಿರಂತರ ಕಠಿಣ ಪರಿಶ್ರಮ,ಸತತ ಅಭ್ಯಾಸದಿಂದ ಮಾತ್ರ ಸಾಧ್ಯ. ಅಂತಹ ಕಠಿಣ ಪರಿಶ್ರಮದಿಂದಲೇ ಇಂದು ನಿಹಾರ್ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ನೀವು ಸಹ ಅವರ ರೀತಿಯಲ್ಲೇ ಕಠಿಣ ಪರಿಶ್ರಮವಹಿಸಿದರೆ ನಿಮಗೂ ಯಶಸ್ಸು ದೂರದ ಮಾತಲ್ಲ ಎಂದು ಕಿವಿಮಾತು ಹೇಳಿದರು.
ಭೌತಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ್ ಭಟ್ಟ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರೆ ಉಪನ್ಯಾಸಕರುಗಳಾದ ಸುರೇಂದ್ರ ಕುಮಾರ್,ಅನಿತಾ ಕೆ ಪಿ ಹಾಗೂ ಡಾ.ರಾಜೇಶ್ವರಿ ಕೆ ಆರ್ ಉಪಸ್ಥಿತರಿದ್ದು ಸಹಕರಿಸಿದರು.