ಪೆರಿಂಜೆ : ಜಪ, ತಪ, ಧ್ಯಾನ, ವೃತ-ನಿಯಮಗಳ ಪಾಲನೆ ಮೊದಲಾದ ಸತ್ಕರ್ಮಗಳಿಂದ ಆತ್ಮನಿಗಂಟಿದ ಸಕಲ ಪಾಪಕರ್ಮಗಳ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ. ಮೋಕ್ಷಪ್ರಾಪ್ತಿಯೇ ಜೀವನದ ಪರಮ ಗುರಿಯಾಗಬೇಕು ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಜೂ27 ರಂದು ಬೆಳ್ತಂಗಡಿ ತಾಲ್ಲೂಕಿನ ಪೆರಿಂಜೆ ಗ್ರಾಮದಲ್ಲಿ ಭಗವಾನ್ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಮಂಗಲಪ್ರವಚನ ನೀಡಿದರು.
ಪರಿಶುದ್ಧ ಮನಸ್ಸಿನಿಂದ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಸದಾ ದೇವರಧ್ಯಾನ ಮಾಡಬೇಕು. ಆಗ ಹುಟ್ಟು-ಸಾವಿನ ಮಧ್ಯದ ಜೀವನ ಮಂಗಳಕರವಾಗಿರುತ್ತದೆ. ಹೆಚ್ಚು ಚಿಂತೆ ಮಾಡಿದರೆ ಬೇಗನೆ ಚಿತೆಗೆ ಹೋಗಬೇಕಾಗುತ್ತದೆ. ಸದಾ ದೇವರ ಧ್ಯಾನದಲ್ಲಿ ಮನಸ್ಸು ಪವಿತ್ರವಾಗುತ್ತದೆ.
ಇತ್ತೀಚೆಗೆ ನಿಧನರಾದ ಪೆರಿಂಜೆ ಮಾಗಣೆ ಗುತ್ತು ಕರಿಮಣೇಲು ಕೆ. ವಿನಯಕುಮಾರ್ ಸೇಮಿತರು, ಉತ್ತಮ ಶ್ರಾವಕರಾಗಿದ್ದು, ಸಮಾಜಸೇವೆಯಲ್ಲಿ ಪರಿಣತರಾಗಿದ್ದು, ಆದರ್ಶ ಕೌಟುಂಬಿಕ ಜೀವನ ನಡೆಸಿದ್ದರು. ಇತ್ತೀಚೆಗೆ ವೇಣೂರಿನಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಮಾಧ್ಯಮಕೇಂದ್ರದ ಸಂಚಾಲಕರಾಗಿ ಅವರು ಮಾಡಿದ ಸೇವೆಯನ್ನು ಸ್ವಾಮೀಜಿ ಸ್ಮರಿಸಿದರು.
ಅವರ ಆತ್ಮನಿಗೆ ಚಿರಶಾಂತಿ ಕೋರಿ 9 ಬಾರಿ ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣ ಮಾಡಲಾಯಿತು.
ಭಗವಾನ್ ಪುಷ್ಪದಂತ ಸ್ವಾಮಿಗೆ 216 ಕಲಶ ಅಭಿಷೇಕ, ಭಗವಾನ್ ಆದಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಬ್ರಹ್ಮಯಕ್ಷ ದೇವರಿಗೆ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ನಡೆಸಲಾಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಪಿ. ಜಯರಾಜ ಕಂಬಳಿ, ಪೆರಿಂಜೆಗುತ್ತು ಹಾಗೂ ಊರ-ಪರವೂರ ಶ್ರಾವಕರು, ಶ್ರಾವಕಿಯರು ಉಪಸ್ಥಿತರಿದ್ದರು.