ತಣ್ಣೀರುಪಂತ ಕೆದ್ಯೇಲು ಎಂಬಲ್ಲಿ ಅಪಾಯಕಾರಿ ಕಾಲುದಾರಿ : ಸ್ಥಳಕ್ಕೆ ತಹಶೀಲ್ದಾರ್‌ ಪೃಥ್ವಿ ಸಾನಿಕಂ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್‌ ಭೇಟಿ: ನಾಗರೀಕರು ಹಾಗೂ ಶಾಲಾ ಮಕ್ಕಳು ತುರ್ಕಳಿಕೆ ಶಾಲೆಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ

Suddi Udaya

ತಣ್ಣೀರುಪಂತ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತಣ್ಣೀರುಪಂತ ಗ್ರಾಮದ ಕೆದ್ಯೇಲು ಎಂಬಲ್ಲಿ ನಾಗರೀಕರು ಹಾಗೂ ಶಾಲಾ ಮಕ್ಕಳು ತುರ್ಕಳಿಕೆ ಶಾಲೆಗೆ ತಲುಪಲು ಕೆದ್ಯೇಲು ಪರಿಸರದ ಜಗನ್ನಾಥ ದಾಸಯ್ಯರವರ ತೋಟದ ಸಮೀಪದ ಕಾಲುದಾರಿ (ತೋಟದ ಬೇಲಿ ಮತ್ತು ತೋಡಿನ ನಡುಭಾಗದಲ್ಲಿರುವ ಕಿರಿದಾದ ಕಟ್ಟಪುನಿ)ದಲ್ಲಿ ಅಪಾಯಕಾರಿಯಾಗಿದ್ದು ಈ ಹಿನ್ನೆಲೆಯಲ್ಲಿ ಜಾಗದ ಪರಿಶೀಲನೆಗಾಗಿ ಜೂ. 30 ರಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್‌, ತಹಶೀಲ್ದಾರ್‌ ಪೃಥ್ವಿ ಸಾನಿಕಮ್, ಕಂದಾಯ ನಿರೀಕ್ಷಕರು‌ ಪಾವಡಪ್ಪ ದೊಡ್ಡಮನಿ, ಪಂಚಾಯತ್‌ ರಾಜ್‌ ಇಂಜಿನಿಯರ್‌ ಗಫೂರ್‌ ಸಾಬ್ , ತಣ್ಣೀರುಪಂತ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ‌ ಶ್ರವಣ್‌ ಕುಮಾರ್, ಕಾರ್ಯದರ್ಶಿ ಆನಂದ್‌, ಗ್ರಾಮಸಹಾಯಕ ಸುಂದರ, ಗ್ರಾಮ ಪಂಚಾಯತ್‌ ಸದಸ್ಯ ತಾಜುದ್ಧಿನ್‌, ತುರ್ಕಳಿಕೆ ಶಾಲೆಯ ಮುಖ್ಯೋಪಾಧ್ಯಾಯರು, ಜಾಗದ ಮಾಲೀಕರು ಮತ್ತು ಸ್ಥಳೀಯರಾದ ಶರೀಫ್‌ ಮತ್ತಿತರರ ಉಪಸ್ಥಿತಿಯಲ್ಲಿ ಸ್ಥಳಪರಿಶೀಲನೆ ನಡೆಸಿದರು.

ಕಾಲುದಾರಿಯು ತೋಡಿನ ಬದಿಯಿಂದ ಸಾಗುತ್ತಿರುವುದರಿಂದ, ನೀರಿನ ರಭಸಕ್ಕೆ ಕಾಲುದಾರಿಯ ಹಲವು ಭಾಗಗಳಲ್ಲಿ ಮಣ್ಣು ಕೊರೆದು ಹೋಗಿರುತ್ತದೆ. ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ಭಾಗದಲ್ಲಿ ನಡೆದುಕೊಂಡು ಹೋಗುವುದು ಅಪಾಯಕಾರಿ ಎಂಬುದನ್ನು ಮನಗಂಡು, ತಾತ್ಕಾಲಿಕ ತುರ್ತು ವ್ಯವಸ್ಥೆ ಮತ್ತು ಶಾಶ್ವತವಾದ ಪರಿಹಾರವನ್ನು ಮಾಡುವ ಕುರಿತಂತೆ ವಿಸ್ತೃತ ವರದಿಯನ್ನು ತಯಾರಿಸಲು ಪಂಚಾಯತ್‌ ಇಂಜಿನಿಯರ್‌ ಅವರಿಗೆ ಸೂಚಿಸಲಾಯಿತು.

ಈ ವೇಳೆ ಸ್ಥಳ ಪರಿಶೀಲಿಸಿದ ನಂತರ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ನಡೆದುಕೊಂಡು ಹೋಗುವ ಈ ಕಾಲು ದಾರಿಯು ತುರ್ಕಳಿಕೆ ಎಂಬ ಪ್ರದೇಶಕ್ಕೆ ಸಂಪರ್ಕಿಸುತ್ತಿದ್ದು ಅಂದಾಜು 1.5 ಕಿ.ಮೀ. ದೂರ ಇರುತ್ತದೆ. ಇದೇ ಪ್ರದೇಶದಿಂದ ತಣ್ಣೀರುಪಂತ-ಕಲ್ಲೇರಿ ಕ್ವಾಟ್ರಸ್‌ ಮಾರ್ಗವಾಗಿ ತುರ್ಕಳಿಕೆಗೆ ಸಾಗಲು ಅಂದಾಜು 6 ಕಿ.ಮೀ. ಅಂತರದ ಸುಸಜ್ಜಿತ ರಸ್ತೆಯಿದ್ದು ತಾತ್ಕಾಲಿಕವಾಗಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪರ್ಯಾಯವಾಗಿ ಇದೇ ರಸ್ತೆಯಿಂದ ತುರ್ಕಳಿಕೆ ಪ್ರದೇಶಕ್ಕೆ ತಲುಪಲು ಗ್ರಾಮಸ್ಥರಿಗೆ ತಿಳಿಸಲಾಯಿತು.


ಗ್ರಾಮಸ್ಥರಿಗೆ ಈ ಕಾಲುದಾರಿಯು ಅವಶ್ಯವೆಂದು ತಿಳಿಸಿದ್ದು, ಈ ಕುರಿತಂತೆ ಚರ್ಚಿಸಲಾಗಿದ್ದು, ಕಾಲುದಾರಿಯ ಹಲವು ಭಾಗಗಳಲ್ಲಿ ಕುಸಿದಿರುವ ಪ್ರದೇಶದಲ್ಲಿ ಅಡಿಕೆ ಮರದ ಪಾಲಗಳನ್ನು ಗ್ರಾಮಸ್ಥರು ಹಾಗೂ ಪಂಚಾಯತ್‌ ಸಹಕಾರದೊಂದಿಗೆ ನಿರ್ಮಿಸುವರೇ ತೀರ್ಮಾನಿಸಲಾಗಿದ್ದು, ಪಾಲಗಳನ್ನು ನಿರ್ಮಿಸಲು ಸ್ಥಳೀಯರಾದ ಜಗನ್ನಾಥ್‌ ದಾಸಯ್ಯರವರು ಅಡಿಕೆ ಮರಗಳನ್ನು ನೀಡಿ ಸಹಕರಿಸಲು ಮತ್ತು ಗ್ರಾಮಸ್ಥರಾದ ಶರೀಫ್‌ ಮತ್ತು ಅಶ್ರಫ್‌ ರವರ ನೇತೃತ್ವದಲ್ಲಿ ಸ್ವಯಂ ಸೇವಕರ ತಂಡದ ಸಹಕಾರದಿಂದ ನಿರ್ಮಿಸಲು ಮತ್ತು ಇತರೆ ಯಾವುದೇ ಸಾಮಾಗ್ರಿಗಳನ್ನು ಗ್ರಾಮ ಪಂಚಾಯತ್‌ ವತಿಯಿಂದ ನೀಡಲು ತೀರ್ಮಾನಿಸಲಾಯಿತು.

ಪ್ರದೇಶದಲ್ಲಿ ಕಾಲುದಾರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡುವಲ್ಲಿಯವರೆಗೆ ಶಾಲಾ ಮಕ್ಕಳನ್ನು ಪರ್ಯಾಯ ರಸ್ತೆಯಲ್ಲೇ ಕರೆದುಕೊಂಡು ಹೋಗಲು ಮಕ್ಕಳ ಪೋಷಕರಿಗೆ ಮತ್ತು ತುರ್ಕಳಿಕೆ ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಲಾಯಿತು. ಕಾಮಗಾರಿಯನ್ನು ಅತೀ ತುರ್ತು ಎಂದು ಪರಿಗಣಿಸಿ ಪಂಚಾಯತ್‌ ಇಂಜಿನಿಯರ್‌ ರವರು, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿಯ ಸಮನ್ವಯದೊಂದಿಗೆ ಅತೀ ಶೀಘ್ರ ನಡೆಸಿಕೊಡಲು ಕಾರ್ಯನಿರ್ವಹಣಾಧಿಕಾರಿಯವರು ಮತ್ತು ತಹಶೀಲ್ದಾರರು ಸೂಚನೆ ನೀಡಿದರು.

Leave a Comment

error: Content is protected !!