ಕಳೆಂಜ: ಇಲ್ಲಿಯ ಶಿಬರಾಜೆ ಕುಟ್ರುಪ್ಪಾಡಿ ನಿವಾಸಿ ರಾಮಣ್ಣ (ದಿನೇಶ್) ನಾಯ್ಕರ ಸೋಗೆ ಮನೆ ಛಾವಣಿಯು ಜೂ.29 ರಾತ್ರಿ ಸುರಿದ ಜಡಿಮಳೆಗೆ ಮುಂಜಾನೆ 3.30ಕ್ಕೆ ಸಂಪೂರ್ಣ ಛಾವಣಿ ಕುಸಿದಿದ್ದು, ಈ ವೇಳೆ ಮನೆಯಲ್ಲಿ ನಿದ್ರಿಸುತ್ತಿದ್ದ ರಾಮಣ್ಣ (ದಿನೇಶ್) ನಾಯ್ಕ, ಪತ್ನಿ ವಾರಿಜ, ಪುತ್ರ ಅಪಾಯದಿಂದ ಪಾರಾಗಿದ್ದಾರೆ.
ಈ ಸಂದರ್ಭ ಅತಂತ್ರರಾದ ರಾಮಣ್ಣರವರ ಕುಟುಂಬದವರಿಗೆ ಪಕ್ಕದ ಮನೆಯ ಅನೂಪ್ ನಾಯ್ಕ ದೇರ್ಯ ಆಶ್ರಯ ನೀಡಿದ್ದರು. ವಿಷಯ ತಿಳಿದು ತಕ್ಷಣ ಧಾವಿಸಿದ ಬಿಜೆಪಿ ಬೂತ್ ಸಮಿತಿ 174ರ ಅಧ್ಯಕ್ಷ ಹರೀಶ ವಳಗುಡ್ಡೆ, ಸದಸ್ಯರು ಮತ್ತು ಕಾರ್ಯಕರ್ತರು ಮುರಿದು ಬಿದ್ದ ಮನೆಯ ಸಾಮಾನುಗಳನ್ನು ವಿಲೇವಾರಿ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸಿದರು.
ಬಡವರಾದ ರಾಮಣ್ಣ (ದಿನೇಶ) ನಾಯ್ಕರವರಿಗೆ ಒಂದು ತಾತ್ಕಾಲಿಕ ಮನೆಯನ್ನು ಒಂದು ವಾರದೊಳಗೆ ನಿರ್ಮಿಸಿ ಕೊಡಬೇಕೆಂದು ಪಣತೊಟ್ಟ ಹರೀಶ ವಳಗುಡ್ಡೆಯವರು, ಕಾರ್ಯಕರ್ತರು, ಗ್ರಾಮಸ್ಥರು, ದಾನಿಗಳನ್ನು ಸಂಪರ್ಕಿಸುತ್ತಿದ್ದಾರೆ.
ಸದ್ಯದ ಮಟ್ಟಿಗೆ ರಾಮಣ್ಣ ನಾಯ್ಕರ ಕುಟುಂಬದವರು ಸಂಬಂಧಿಕರಾದ ದಯಾನಂದ ನಾಯ್ಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ.