ಉಜಿರೆ : ಇಲ್ಲಿನ ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನಲ್ಲಿ ಡಾ |ಜೇಸನ್ ಅವಿತ್ ಪಿರೇರಾ ಅವರ ಜೊತೆ ವೈದ್ಯಕೀಯ ಶಾಸ್ತ್ರ ಕಲಿಕಾ ಆಕಾಂಕ್ಷ ವಿದ್ಯಾರ್ಥಿಗಳನ್ನು ಸಂವಾದ ನಡೆಸುವುದರ ಮೂಲಕ ವೈದ್ಯರ ದಿನವನ್ನು ಬಹಳ ವಿನೂತನವಾಗಿ ಆಚರಿಸಲಾಯಿತು.
ಡಾ| ಜೇಸನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವೈದ್ಯಕೀಯ ಕಲಿಕೆಗೆ ಬೇಕಾಗುವ ಪೂರ್ವ ತಯಾರಿಗಳನ್ನು ಹೇಗೆ ಮಾಡಿಕೊಳ್ಳಬೇಕು, ಪದವಿ ಪೂರ್ವ ಹಂತದ ವಿಜ್ಞಾನ ವಿಭಾಗದಲ್ಲಿ ಯಾವ ರೀತಿ ಓದಬೇಕು ಹಾಗೂ ಉತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಓದಲು ಅವಕಾಶ ಬೇಕಾದರೆ ಪ್ರಸ್ತುತ ಇರುವ ನೀಟ್ ಪರೀಕ್ಷೆಗೆ ತಯಾರಿಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ವಿವರಿಸಿದರು. ಅದೇ ರೀತಿ ಹೊರ ದೇಶಗಳಲ್ಲಿನ ಅವಕಾಶಗಳು ಅದಕ್ಕೆ ಬೇಕಾದ ತಯಾರಿಗಳ ಕುರಿತು ಬಹಳ ವಿವರವಾಗಿ ವಿವರಿಸಿ, ಇಷ್ಟ ಇದ್ದದ್ದನ್ನು ಪಡೆಯಬೇಕಾದರೆ ಕಷ್ಟ ಪಟ್ಟು ಓದುವುದು ಸಹ ಅಷ್ಟೇ ಅಗತ್ಯ ಇರುತ್ತದೆ ಆದ ಕಾರಣ ಎಲ್ಲರೂ ಉತ್ತಮ ರೀತಿಯಲ್ಲಿ ಓದುವಂತೆ ಹಾಗೂ ಉಪನ್ಯಾಸಕರುಗಳ ಮಾರ್ಗದರ್ಶನದಲ್ಲಿ ನಿರಂತರ ಶ್ರಮ ವಹಿಸುವಂತೆ ವಿದ್ಯಾರ್ಥಿಗಳನ್ನು ಅಭಿಪ್ರೇರಣೆ ಗೊಳಿಸಿದರು.ಇದೆ ಸಮಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ಅವರಲ್ಲಿನ ಗೊಂದಲಗಳನ್ನು ಬಗೆ ಹರಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪರವಾಗಿ ಡಾ.ಜೇಸನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರಾದ ಬಿ.ಸೋಮಶೇಖರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕಾ ಸಮಯ ಎಂಬುದು ಒಂದು ತಪಸ್ಸು. ತಪಸ್ಸಿನ ಸಮಯದಲ್ಲಿ ಬಗೆ -ಬಗೆಯ ಅಡೆ ತಡೆಗಳು ಬರುತ್ತವೆ. ಆದರೆ ಯಾರು ಆ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಕೇವಲ ತನ್ನ ಜ್ಞಾನರ್ಜನೆ ಕಡೆಗೆ ಮಾತ್ರ ಆಸಕ್ತಿ ವಹಿಸಿ ಕಷ್ಟ ಪಡುತ್ತಾರೋ ಅವರಿಗೆ ಯಶಸ್ಸು ಶತಃ ಸಿದ್ದ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಮಾತ್ರ ಗಮನ ಹರಿಸುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಬಿ ಪ್ರಮೋದ್ ಕುಮಾರ್ ಮಾತನಾಡಿ, ಕಷ್ಟ ಪಟ್ಟಷ್ಟು ಒಳ್ಳೊಳ್ಳೆ ಅವಕಾಶ ಹಾಗೂ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಡಾ. ಜೇಸನ್ ಅವರೇ ಉತ್ತಮ ನಿದರ್ಶನ. ಅವರು ಕೊಟ್ಟ ಮಾರ್ಗದರ್ಶನದಲ್ಲಿ ನೀವೂ ಹೆಜ್ಜೆ ಇಟ್ಟರೆ ನಿಮಗೂ ಅವರಂತೆ ಉತ್ತಮ ಅವಕಾಶಗಳು ಹಾಗೂ ಯಶಸ್ಸು ದೊರೆಯುತ್ತದೆ. ಆದರೆ ಪ್ರಯತ್ನ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿ. ಇ.ಟಿ ಮತ್ತು ನೀಟ್ ತರಬೇತಿಯ ಸಹ ಸಂಯೋಜಕರುಗಳಾದ ಡಾ.ರಾಜೇಶ್ವರಿ ಕೆ. ಆರ್, ಶ್ರೀಮತಿ ಅನಿತಾ ಕೆ ಪಿ ಹಾಗೂ ಸುರೇಂದ್ರ ಕುಮಾರ್ ಉಪಸ್ಥಿತರಿದ್ದು ಸಹಕರಿಸಿದರು.
ಮಂಗಳೂರಿನ ಶೃತ ಅಕಾಡೆಮಿಯ ಮುಖ್ಯಸ್ಥ ಹಾಗೂ ಕಾಲೇಜಿನ ಸಿ.ಇ. ಟಿ ಮತ್ತು ನೀಟ್ ಮುಖ್ಯ ಸಂಯೋಜಕರಾದ ಡಾ. ಶೃತಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ಭೌತ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ್ ಭಟ್ ವಂದಿಸಿದರು.